ಸಂಸತ್ತಿನ ಮುಂಗಾರು ಅಧಿವೇಶನದ ಹಿನ್ನೆಲೆ | ಇಂಡಿಯಾ ಮೈತ್ರಿಕೂಟದಿಂದ ಮಹತ್ವದ ಸಭೆ
Photo credit: PTI
ಹೊಸದಿಲ್ಲಿ: 13 ತಿಂಗಳ ನಂತರ ಮೊದಲ ಬಾರಿಗೆ ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ(INDIA) ಮೈತ್ರಿ ಕೂಟದ ಹಿರಿಯ ನಾಯಕರು ಸಭೆ ಸೇರಿದ್ದು, ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿ, ಆಪರೇಷನ್ ಸಿಂಧೂರ ಕಾರ್ಯಾಚರಣೆ, ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಮತ್ತು ವಿದೇಶಾಂಗ ನೀತಿ ವಿಚಾರಗಳ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಲು ನಿರ್ಧರಿಸಿದೆ.
ಆಪ್ ಮೈತ್ರಿಕೂಟದಿಂದ ಹೊರಗಿರುವುದಾಗಿ ಈ ಮೊದಲು ಘೋಷಿಸಿತ್ತು. ಇದರಿಂದ ಇಂಡಿಯಾ ಮೈತ್ರಿ ಕೂಟದ ನಾಯಕರ ಆನ್‌ಲೈನ್ ಸಭೆಗೆ ಆಪ್ ನಾಯಕರು ಭಾಗಿಯಾಗಿರಲಿಲ್ಲ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿರುದ್ಧ ಸಂಸತ್ತಿನ ಒಳಗೆ ಪ್ರತಿಭಟನೆ ಅಥವಾ ಚುನಾವಣಾ ಆಯೋಗ ಅಥವಾ ಜಂತರ್ ಮಂತರ್‌ಗೆ ಮೆರವಣಿಗೆ ಬಗ್ಗೆ ಕೂಡ ಇಂಡಿಯಾ ಮೈತ್ರಿ ಕೂಟದ ನಾಯಕರು ಚಿಂತನೆ ಮಾಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ಕಾರ್ಯಾಚರಣೆ, ಬಿಹಾರ ಎಸ್ಐಆರ್ ಮತ್ತು ವಿದೇಶಾಂಗ ನೀತಿ ನಮ್ಮ ಆದ್ಯತೆಯಾಗಿರಬೇಕು ಎಂದು ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಕಾರ್ಯಸೂಚಿಯನ್ನು ರೂಪಿಸಿದರು. ಇದಕ್ಕೆ ಇತರ ನಾಯಕರು ಸಮ್ಮತಿಸಿದ್ದಾರೆ ಎಂದು ವರದಿಯಾಗಿದೆ.
ಗಡಿ ನಿರ್ಣಯ, ಜಮ್ಮುಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ, ಎಸ್ಸಿ, ಎಸ್ಟಿ, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದಂತಹ ಇತರ ವಿಷಯಗಳನ್ನು ಕೂಡ ಸಂಸತ್ತಿನಲ್ಲಿ ಪ್ರಸ್ತಾಪಿಸಲು ಇಂಡಿಯಾ ಮೈತ್ರಿಕೂಟದ ನಾಯಕರು ಸಮ್ಮತಿಸಿದ್ದಾರೆ ಎಂದು ವರದಿಯಾಗಿದೆ.
ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಉದ್ಧವ್ ಠಾಕ್ರೆ, ಶರದ್ ಪವಾರ್, ಉಮರ್ ಅಬ್ದುಲ್ಲಾ, ಹೇಮಂತ್ ಸೊರೆನ್, ಅಭಿಷೇಕ್ ಬ್ಯಾನರ್ಜಿ, ತೇಜಸ್ವಿ ಯಾದವ್, ಎಂಎ ಬೇಬಿ, ಡಿ ರಾಜಾ, ದೀಪಂಕರ್ ಭಟ್ಟಾಚಾರ್ಯ, ಜಿ ದೇವರಾಜನ್ ಮತ್ತು ಎನ್ಕೆ ಪ್ರೇಮಚಂದ್ರನ್ ಸೇರಿದಂತೆ ಇತರರು ಭಾಗವಹಿಸಿದ್ದರು.