ಪಹಲ್ಗಾಮ್, ಆಪರೇಶನ್ ಸಿಂಧೂರ್ ಬಗ್ಗೆ ಸಂಸತ್ ನಲ್ಲಿ ಕನಿಷ್ಠ 2 ದಿನ ಚರ್ಚೆಯಾಗಬೇಕು: ಜೈರಾಮ್ ರಮೇಶ್
ಜೈರಾಮ್ ರಮೇಶ್ | PTI
ಹೊಸದಿಲ್ಲಿ, ಜು. 18: ಪಹಲ್ಗಾಮ್ ಭಯೋತ್ಪಾದಕ ದಾಳಿ, ಆಪರೇಶನ್ ಸಿಂಧೂರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಹೇಳಿಕೆಗಳು ಮತ್ತು ಚೀನಾ ಮುಂತಾದ ವಿಷಯಗಳ ಕುರಿತು ಸಂಸತ್ ನಲ್ಲಿ ಕನಿಷ್ಠ ಎರಡು ದಿನ ಚರ್ಚೆ ನಡೆಯಬೇಕು ಎಂಬ ಪ್ರತಿಪಕ್ಷದ ಬೇಡಿಕೆಯಲ್ಲಿ ಯಾವುದೇ ರಾಜಿಯಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಶುಕ್ರವಾರ ಹೇಳಿದ್ದಾರೆ.
ಸಂಸತ್ ನ ಮುಂಗಾರು ಅಧಿವೇಶನದ ಮುನ್ನ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಈ ಎಲ್ಲಾ ವಿಷಯಗಳಿಗೆ ಸದನದಲ್ಲಿ ಪ್ರತಿಕ್ರಿಯಿಸಬೇಕು ಎಂದು ಹೇಳಿದರು. ಮುಂಗಾರು ಅಧಿವೇಶನವು ಸೋಮವಾರ ಆರಂಭಗೊಳ್ಳಲಿದೆ.
ಈ ವಿಷಯದಲ್ಲಿ ‘ಇಂಡಿಯಾ’ ಮೈತ್ರಿಕೂಟವು ಒಗ್ಗಟ್ಟಿನಿಂದಿದೆ ಎಂದು ಅವರು ತಿಳಿಸಿದರು. ಅದರ ಪ್ರಮುಖ ನಾಯಕರು ಶನಿವಾರ ಆನ್ಲೈನ್ ನಲ್ಲಿ ಮಾತುಕತೆ ನಡೆಸುತ್ತಾರೆ ಹಾಗೂ ಬಳಿಕ, ದಿಲ್ಲಿಯಲ್ಲಿ ಸಭೆ ಸೇರಲಿದ್ದಾರೆ ಎಂದು ಅವರು ನುಡಿದರು.
ಚುನಾವಣಾ ಆಯೋಗವು ಬಿಹಾರದಲ್ಲಿ ನಡೆಸುತ್ತಿರುವ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ಬಗ್ಗೆ ಸಂಸತ್ ನಲ್ಲಿ ಚರ್ಚೆಯಾಗಬೇಕೆಂಬ ಇಂಡಿಯಾ ಮೈತ್ರಿಕೂಟದ ಬೇಡಿಕೆಯಲ್ಲೂ ಯಾವುದೇ ರಾಜಿಯಿಲ್ಲ ಎಂದು ರಮೇಶ್ ಹೇಳಿದರು.
‘‘ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಸಂಸತ್ ನಲ್ಲಿ ಕನಿಷ್ಠ ಎರಡು ಇಡೀ ದಿನ ಚರ್ಚೆ ನಡೆಯಬೇಕು. ಆ ದಾಳಿ ನಡೆಸಿರುವ ಭಯೋತ್ಪಾದಕರು ಈಗಲೂ ತಪ್ಪಿಸಿಕೊಂಡಿದ್ದಾರೆ. ಆಪರೇಶನ್ ಸಿಂಧೂರ ಬಗ್ಗೆ ಮೊದಲು ಸೇನಾಪಡೆಗಳ ಮುಖ್ಯಸ್ಥ ಜನರಲ್ ಚೌಹಾಣ್, ಬಳಿಕ ಗ್ರೂಪ್ ಕ್ಯಾಪ್ಟನ್ ಶಿವಕುಮಾರ್ ಮತ್ತು ಮೂರನೆಯದಾಗಿ ಲೆಫ್ಟಿನೆಂಟ್ ಜನರಲ್ ರಾಹುಲ್ ಸಿಂಗ್ ಮಹತ್ವದ ಸಂಗತಿಗಳನ್ನು ಹೇಳಿದ್ದಾರೆ’’ ಎಂದು ಅವರು ತಿಳಿಸಿದರು.
‘‘ಮೂವರು ಅತ್ಯಂತ ಹಿರಿಯ, ಗೌರವಾನ್ವಿತ, ಅನುಭವಿ ರಕ್ಷಣಾ ಅಧಿಕಾರಿಗಳು ಆಪರೇಶನ್ ಸಿಂಧೂರ ಬಗ್ಗೆ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಅದಕ್ಕಾಗಿಯೇ ನಾವು ಚರ್ಚೆಯಾಗಬೇಕೆಂದು ಹೇಳುತ್ತಿರುವುದು’’ ಎಂದು ರಮೇಶ್ ನುಡಿದರು.