×
Ad

ಪಹಲ್ಗಾಮ್ ಉದ್ವಿಗ್ನತೆ ನಡುವೆ ಅಕ್ಸೆಂಚರ್ ಉದ್ಯೋಗಿಯ ಗಡಿಪಾರನ್ನು ತಡೆಹಿಡಿದ ಸುಪ್ರೀಂ ಕೋರ್ಟ್

Update: 2025-05-02 18:11 IST

ಸುಪ್ರೀಂ ಕೋರ್ಟ್ | PTI

ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ರಾಜತಾಂತ್ರಿಕ ನಿರ್ಬಂಧಗಳ ಭಾಗವಾಗಿ ವೀಸಾಗಳನ್ನು ರದ್ದುಗೊಳಿಸುತ್ತಿರುವ ಮತ್ತು ಪಾಕಿಸ್ತಾನಿ ಪ್ರಜೆಗಳನ್ನು ದೇಶದಿಂದ ಹೊರಹಾಕುತ್ತಿರುವ ಸರಕಾರದ ಆದೇಶದ ಮೇರೆಗೆ ಬೆಂಗಳೂರಿನ ಅಕ್ಸೆಂಚರ್ ಕಂಪನಿಯ ಉದ್ಯೋಗಿ ಮತ್ತು ಅವರ ಕುಟುಂಬದ ಗಡಿಪಾರಿಗೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ತಡೆಯಾಜ್ಞೆ ನೀಡಿದೆ.

ಅಕ್ಸೆಂಚರ್ ಉದ್ಯೋಗಿ ಅಹ್ಮದ್ ತಾರಿಕ್ ಭಟ್ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದು, ತಾವು ಭಾರತೀಯ ಪಾಸ್‌ಪೋರ್ಟ್ ಮತ್ತು ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದರೂ ತನಗೆ ಮತ್ತು ತನ್ನ ಕುಟುಂಬಕ್ಕೆ ದೇಶವನ್ನು ತೊರೆಯುವಂತೆ ಆದೇಶಿಸಲಾಗಿದೆ ಎಂದು ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ದಾಖಲೆಗಳನ್ನು ಪರಿಶೀಲಿಸುವಂತೆ ಮತ್ತು ಅಲ್ಲಿಯವರೆಗೆ ಭಟ್ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ಕೈಗೊಳ್ಳದಂತೆ ಸರ್ವೋಚ್ಚ ನ್ಯಾಯಾಲಯವು ನಿರ್ದೇಶನ ನೀಡಿದೆ. ಭಟ್ ಕೇರಳದ ಕೋಝಿಕೋಡ್‌ನ ಐಐಎಮ್‌ನಿಂದ ಎಂಬಿಎ ಪದವಿಯನ್ನು ಪಡೆದಿದ್ದಾರೆ.

ಹೆಚ್ಚಿನ ಪರಿಹಾರಕ್ಕಾಗಿ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಸಹ ನ್ಯಾಯಾಲಯವು ಭಟ್ ಅವರಿಗೆ ಸೂಚಿಸಿದ್ದು, ಸರಕಾರದ ಪರ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ನ್ಯಾಯಾಲಯದ ಆದೇಶವನ್ನು ವಿರೋಧಿಸಿದರು. ಆದರೆ ಸರ್ವೋಚ್ಚ ನ್ಯಾಯಾಲಯವು ಈ ವಿಷಯದಲ್ಲಿ ‘ಕೆಲವು ಮಾನವೀಯ ಅಂಶ’ವನ್ನು ಬೆಟ್ಟು ಮಾಡಿತು.

ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ತನ್ನ ಆದೇಶವನ್ನು ಇತರ ಪ್ರಕರಣಗಳಲ್ಲಿ ಪೂರ್ವ ನಿದರ್ಶನವನ್ನಾಗಿ ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿತು. ವೀಸಾಗಳನ್ನು ರದ್ದುಗೊಳಿಸಿದ ಬಳಿಕ ಮುಸ್ಲಿಮ್ ಹೆಸರುಗಳನ್ನು ಹೊಂದಿರುವ ಹೆಚ್ಚಿನವರು ಸೇರಿದಂತೆ ಭಾರತೀಯ ಪ್ರಜೆಗಳನ್ನು ದೇಶವನ್ನು ತೊರೆಯುವಂತೆ ಸೂಚಿಸಲಾಗಿದೆ ಎಂಬ ಹಲವಾರು ವರದಿಗಳನ್ನು ಗಮನಿಸಿದರೆ ನ್ಯಾಯಾಲಯದ ಈ ಸ್ಪಷ್ಟನೆ ಮಹತ್ವದ್ದಾಗಿದೆ.

ಶುಕ್ರವಾರ ವಿಚಾರಣೆ ಸಂದರ್ಭದಲ್ಲಿ ನ್ಯಾ.ಸೂರ್ಯಕಾಂತ್ ಅವರು,‘ನೀವು ಜನಿಸಿದ್ದು ಪಾಕಿಸ್ತಾನದ ಮೀರ್ಪುರದಲ್ಲಿ. ನೀವು ಭಾರತಕ್ಕೆ ಬಂದಿದ್ದು ಹೇಗೆ ಮತ್ತು ಏಕೆ?’ಎಂದು ಭಟ್ ಅವರನ್ನು ಪ್ರಶ್ನಿಸಿದರು.

ತಾನು 1997ರಲ್ಲಿ ಪಾಕಿಸ್ತಾನಿ ಪಾಸ್‌ಪೋರ್ಟ್ ಹೊಂದಿದ್ದ ತನ್ನ ತಂದೆಯೊಂದಿಗೆ ಭಾರತಕ್ಕೆ ಬಂದಿದ್ದಾಗಿ ಭಟ್ ಉತ್ತರಿಸಿದರು.

ಶ್ರೀನಗರಕ್ಕೆ ಆಗಮಿಸಿದ ಬಳಿಕ ತನ್ನ ಪಾಸ್‌ಪೋರ್ಟ್‌ನ್ನು ಜಮ್ಮುಕಾಶ್ಮೀರ ಉಚ್ಚ ನ್ಯಾಯಾಲಯಕ್ಕೆ ಒಪ್ಪಿಸಿದ್ದೆ. ಬಳಿಕ ಅರ್ಜಿ ಸಲ್ಲಿಸಿ ಭಾರತೀಯ ಪಾಸ್‌ಪೋರ್ಟ್ ಪಡೆದುಕೊಂಡಿದ್ದೆ ಎಂದು ಭಟ್ ತಿಳಿಸಿದರು. ತನ್ನ ಕುಟುಂಬದ ಇತರ ಸದಸ್ಯರು ಮೂರು ವರ್ಷಗಳ ಬಳಿಕ 2000ರಲ್ಲಿ ಶ್ರೀನಗರಕ್ಕೆ ಆಗಮಿಸಿದ್ದರು. ಅವರೂ ಭಾರತೀಯ ಪೌರತ್ವ ಮತ್ತು ಪಾಸ್‌ಪೋರ್ಟ್ ಪಡೆದುಕೊಂಡಿದ್ದರು ಎಂದರು.

ತಾನು ಮತ್ತು ತನ್ನ ಒಡಹುಟ್ಟಿದವರು ನಗರದ ಖಾಸಗಿ ಶಾಲೆಯಲ್ಲಿ ಶಿಕ್ಷಣವನ್ನು ಪಡೆದಿದ್ದೆವು ಎಂದು ತಿಳಿಸಿದ ಭಟ್, ಈ ದಾಖಲೀಕರಣದ ಮತ್ತು ತಾನು ಮತ್ತು ತನ್ನ ಕುಟುಂಬ ಸದಸ್ಯರು ಆಧಾರ ಕಾರ್ಡ್‌ಗಳನ್ನು ಹೊಂದಿರುವುದರ ಹೊರತಾಗಿಯೂ ದೇಶವನ್ನು ತೊರೆಯುವಂತೆ ಗೃಹ ಸಚಿವಾಲಯವು ಕಳೆದ ವಾರ ತನಗೆ ನೋಟಿಸ್ ಹೊರಡಿಸಿದೆ. ತಾವು ವೀಸಾಗಳ ಮೇಲೆ ಭಾರತವನ್ನು ಪ್ರವೇಶಿಸಿದ್ದು, ಅವಧಿ ಮುಗಿದರೂ ಇಲ್ಲಿಯೇ ಉಳಿದುಕೊಂಡಿದ್ದೇವೆ ಎಂದು ನೋಟಿಸ್‌ನಲ್ಲಿ ತಪ್ಪಾಗಿ ತಿಳಿಸಲಾಗಿದೆ ಎಂದು ಭಟ್ ಪ್ರತಿಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News