ಪಹಲ್ಗಾಮ್ ದಾಳಿಯ ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪ: ಇಬ್ಬರು ಸ್ಥಳೀಯ ನಿವಾಸಿಗಳ ಬಂಧನ
File Photo: PTI
ಹೊಸದಿಲ್ಲಿ: ಎ.22ರಂದು ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿಯನ್ನು ನಡೆಸಿದ್ದ ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದಲ್ಲಿ ಇಬ್ಬರು ಸ್ಥಳೀಯ ನಿವಾಸಿಗಳನ್ನು ಎನ್‌ಐಎ ಬಂಧಿಸಿದೆ.
ಪಹಲ್ಗಾಮ್‌ನ ಬಟ್‌ಕೋಟ್ ನಿವಾಸಿ ಪರ್ವೇಜ್ ಅಹ್ಮದ್ ಜೋಥರ್ ಮತ್ತು ಹಿಲ್ ಪಾರ್ಕ್ ನಿವಾಸಿ ಬಶೀರ್ ಅಹ್ಮದ್ ಜೋಥರ್ ಎಂಬವರನ್ನು ಕಾನೂನು ಬಾಹಿರ ಚಟುವಟಿಕೆಗಳ(ತಡೆ) ಕಾಯ್ದೆಯಡಿ ಬಂಧಿಸಲಾಗಿದೆ. ಬಂಧಿತ ಆರೋಪಿಗಳು ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಶಸ್ತ್ರಸಜ್ಜಿತ ಭಯೋತ್ಪಾದಕರ ಗುರುತುಗಳನ್ನು ಬಹಿರಂಗಗೊಳಿಸಿದ್ದಾರೆ ಮತ್ತು ಅವರು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರೆ ತೈಬಾ(ಎಲ್‌ಇಟಿ)ಕ್ಕೆ ಸೇರಿದ ಪಾಕಿಸ್ತಾನಿ ಪ್ರಜೆಗಳು ಎನ್ನುವುದನ್ನೂ ದೃಢಪಡಿಸಿದ್ದಾರೆ ಎಂದು ಎನ್‌ಐಎ ವಕ್ತಾರರು ತಿಳಿಸಿದರು.
ತನಿಖೆಯ ಪ್ರಕಾರ ಪರ್ವೈಝ್ ಮತ್ತು ಬಶೀರ್ ಗೊತ್ತಿದ್ದೇ ದಾಳಿಗೆ ಮುನ್ನ ಹಿಲ್ ಪಾರ್ಕ್‌ನಲ್ಲಿಯ ಗುಡಿಸಲೊಂದರಲ್ಲಿ ಮೂವರು ಶಸ್ತ್ರಸಜ್ಜಿತ ಭಯೋತ್ಪಾದಕರಿಗೆ ಆಶ್ರಯ,ಆಹಾರ ಮತ್ತು ಇತರ ಸೌಲಭ್ಯಗಳನ್ನು ಒದಗಿಸಿದ್ದರು. ಇದೇ ಭಯೋತ್ಪಾದಕರು ಎ.22ರಂದು ಅಪರಾಹ್ನ ಧರ್ಮದ ಆಧಾರದಲ್ಲಿ ಆಯ್ದುಕೊಂಡು ಹಲವಾರು ಪ್ರವಾಸಿಗಳನ್ನು ಕೊಂದಿದ್ದು, ಇದು ಈವರೆಗಿನ ಅತ್ಯಂತ ಭೀಕರ ದಾಳಿಗಳಲ್ಲೊಂದಾಗಿದೆ ಎಂದೂ ವಕ್ತಾರರು ತಿಳಿಸಿದರು.
ಈ ತಿಂಗಳ ಆರಂಭದಲ್ಲಿ ಜಾಗತಿಕ ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಆರ್ಥಿಕ ನೆರವು ಕುರಿತು ಕಣ್ಗಾವಲು ಸಂಸ್ಥೆ ಫೈನಾನ್ಸಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್(ಎಫ್‌ಎಟಿಎಫ್) ಪಹಲ್ಗಾಮ್‌ನ ಕ್ರೂರ ಭಯೋತ್ಪಾದಕ ದಾಳಿಯನ್ನು ಖಂಡಿಸಿತ್ತಲ್ಲದೆ,ಹಣವಿಲ್ಲದೆ ಮತ್ತು ಅದನ್ನು ಭಯೋತ್ಪಾದಕರ ಬೆಂಬಲಿಗರ ನಡುವೆ ವರ್ಗಾಯಿಸುವ ಸೂಕ್ತ ವ್ಯವಸ್ಥೆಯಿಲ್ಲದೆ ಇಂತಹ ದಾಳಿಗಳು ಸಂಭವಿಸುವುದಿಲ್ಲ ಎಂದು ಹೇಳಿತ್ತು.