ಪಾಕ್ ಸೇನಾ ಮುಖ್ಯಸ್ಥನಿಗೆ ಅಮೆರಿಕದಲ್ಲಿ ರಾಜಾತಿಥ್ಯ; ಭಾರತೀಯ ರಾಜತಾಂತ್ರಿಕತೆಗೆ ಸಿಕ್ಕ ದೊಡ್ಡ ಹೊಡೆತ: ಕಾಂಗ್ರೆಸ್
ಅಸೀಮ್ ಮುನೀರ್ | PC : X \ @TahaSSiddiqui
ಹೊಸದಿಲ್ಲಿ: ಪಾಕಿಸ್ತಾನಿ ಸೇನೆಯ ಮುಖ್ಯಸ್ಥ ಅಸೀಮ್ ಮುನೀರ್ ಗೆ ಅಮೆರಿಕದಲ್ಲಿ ರಾಜಾತಿಥ್ಯ ಲಭಿಸಿರುವ ವಿಷಯದಲ್ಲಿ ಕೇಂದ್ರ ಸರಕಾರದ ವಿರುದ್ಧ ಗುರುವಾರ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಇದು ಭಾರತೀಯ ರಾಜತಾಂತ್ರಿಕತೆಗೆ ಸ್ಕಿಕ ದೊಡ್ಡ ಹೊಡೆತವಾಗಿದೆ ಎಂದು ಹೇಳಿದೆ.
‘‘ಫೀಲ್ಡ್ ಮಾರ್ಶಲ್ ಅಸೀಮ್ ಮುನೀರ್ ಯಾವುದೇ ದೇಶದ ಸರಕಾರಿ ಮುಖ್ಯಸ್ಥರಲ್ಲ. ಅವರು ಪಾಕಿಸ್ತಾನಿ ಸೇನೆಯ ಮುಖ್ಯಸ್ಥ. ಹೀಗಿದ್ದರೂ, ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಆಹ್ವಾನಿಸಿ ಅವರೊಂದಿಗೆ ಮಧ್ಯಾಹ್ನದ ಊಟ ಮಾಡಿದರು ಹಾಗೂ ಅವರನ್ನು ಬಾಯಿ ತುಂಬಾ ಹೊಗಳಿದರು’’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
‘‘ಇದೇ ವ್ಯಕ್ತಿಯ ಪ್ರಚೋದನಕಾರಿ ಮತ್ತು ಆಕ್ಷೇಪಾರ್ಹ ಹೇಳಿಕೆಗಳು ಎಪ್ರಿಲ್ 22ರಂದು ಪಹಲ್ಗಾಮ್ ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಕಾರಣವಾಗಿದ್ದವು. ಆ ದಾಳಿಯನ್ನು ಅವರದೇ ನೇತೃತ್ವದ ಸೇನಾ ಯಂತ್ರವು ಕಾರ್ಯಗತಗೊಳಿಸಿತು. ಇದು ಭಾರತೀಯ ರಾಜತಾಂತ್ರಿಕತೆಗೆ (ಆಲಿಂಗನ ರಾಜತಾಂತ್ರಿಕತೆಗೂ) ಸಿಕ್ಕ ದೊಡ್ಡ ಹೊಡೆತವಾಗಿದೆ!’’ ಎಂದು ಅವರು ಹೇಳಿದ್ದಾರೆ.
ಬುಧವಾರ ಆಸಿಮ್ ಮುನೀರ್ ಜೊತೆಗೆ ಭೋಜನ ಸ್ವೀಕರಿಸಿದ ಬಳಿಕ ಮಾತನಾಡಿದ ಟ್ರಂಪ್, ಅವರನ್ನು ಭೇಟಿಯಾಗುವ ಮೂಲಕ ನನಗೆ ಗೌರವ ಬಂದಿದೆ ಎಂದು ಹೇಳಿದ್ದರು. ಪರಮಾಣು ಯುದ್ಧಕ್ಕೆ ತಿರುಗಬಹುದಾಗಿದ್ದ ಯುದ್ಧವನ್ನು ಮುಂದುವರಿಸದಿರಲು ಭಾರತ ಮತ್ತು ಪಾಕಿಸ್ತಾನದ ನಾಯಕರು ನಿರ್ಧರಿಸಿದರು ಎಂದು ಓವಲ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ಹೇಳಿದ್ದರು.
‘‘ಆಸಿಮ್ ಮುನೀರ್ ಇಲ್ಲಿರುವುದಕ್ಕೆ ಕಾರಣವೆಂದರೆ, ನಾನು ಅವರನ್ನು ಆಹ್ವಾನಿಸಿರುವುದು. ಯುದ್ಧವನ್ನು ಮುಂದುವರಿಸದಿರುವುದಕ್ಕಾಗಿ ನಾನು ಅವರಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ನಿಮಗೆ ಗೊತ್ತಿರುವಂತೆ, ಪ್ರಧಾನಿ ಮೋದಿ ಸ್ವಲ್ಪ ಹೊತ್ತಿನ ಹಿಂದಷ್ಟೇ ಇಲ್ಲಿಂದ ಹೊರಟಿದ್ದಾರೆ. ನಾವು ಭಾರತದೊಂದಿಗೆ ವ್ಯಾಪಾರ ಒಪ್ಪಂದವೊಂದನ್ನು ಮಾಡಲು ಉದ್ದೇಶಿಸಿದ್ದೇವೆ. ನಾವು ಪಾಕಿಸ್ತಾನದೊಂದಿಗೂ ವ್ಯಾಪಾರ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದರಲ್ಲಿದ್ದೇವೆ’’ ಎಂದು ಟ್ರಂಪ್ ಹೇಳಿದ್ದರು.
‘‘ಇಬ್ಬರು ಜಾಣ ವ್ಯಕ್ತಿಗಳು ಮತ್ತು ಅವರ ಸಿಬ್ಬಂದಿ ಕೂಡ, ಆದರೆ ಇಬ್ಬರು ಜಾಣ ವ್ಯಕ್ತಿಗಳು, ಇಬ್ಬರು ಅತಿ ಜಾಣ ವ್ಯಕ್ತಿಗಳು ಆ ಯುದ್ಧವನ್ನು ಮುಂದುವರಿಸದಿರಲು ನಿರ್ಧರಿಸಿದರು. ಅದು ಪರಮಾಣು ಯುದ್ಧಕ್ಕೆ ತಿರುಗಬಹುದಾಗಿತ್ತು. ಅವುಗಳು ಪರಮಾಣು ಶಕ್ತ ದೇಶಗಳು, ದೊಡ್ಡ, ದೊಡ್ಡ ಪರಮಾಣು ಶಕ್ತಿಗಳು... ಅವರು ಈ ನಿರ್ಧಾರವನ್ನು ತೆಗೆದುಕೊಂಡರು’’ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದರು.
ಪಾಕಿಸ್ತಾನಿ ಸೇನೆಯ ಮುಖ್ಯಸ್ಥರೊಂದಿಗೆ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಬಗ್ಗೆಯೂ ಚರ್ಚಿಸಿದ್ದಾಗಿ ಟ್ರಂಪ್ ಹೇಳಿದ್ದರು.