×
Ad

ಜಾಗತಿಕ ಮಟ್ಟದಲ್ಲಿ ಪಾಕ್ ಮೇಲೆ ಒತ್ತಡ ಹೇರಲು ನಿಯೋಗಗಳ ನಾಯಕರಾಗಿ ಏಳು ಸಂಸದರ ಆಯ್ಕೆ

Update: 2025-05-17 20:11 IST

PC : PTI 

ಹೊಸದಿಲ್ಲಿ: ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡವನ್ನು ಹೆಚ್ಚಿಸಲು ಪ್ರಮುಖ ಪಾಲುದಾರ ದೇಶಗಳಿಗೆ ಭೇಟಿ ನೀಡಲಿರುವ ಬಹು-ಪಕ್ಷ ನಿಯೋಗಗಳ ನಾಯಕರಾಗಿ ಏಳು ಸಂಸದರನ್ನು ಕೇಂದ್ರ ಸರಕಾರವು ಹೆಸರಿಸಿದೆ,ಆದರೆ ತನ್ನ ಪಕ್ಷದಿಂದ ಆಯ್ಕೆ ಮಾಡಿರುವ ಸಂಸದರ ಬಗ್ಗೆ ಕಾಂಗ್ರೆಸ್ ಅಸಮಾಧಾನವನ್ನು ವ್ಯಕ್ತಪಡಿಸಿದೆ.

ಸಂಸದರಾದ ಶಶಿ ತರೂರ್(ಕಾಂಗ್ರೆಸ್),ರವಿಶಂಕರ ಪ್ರಸಾದ ಮತ್ತು ಬೈಜಯಂತ ಪಾಂಡಾ(ಬಿಜೆಪಿ),ಸಂಜಯ ಝಾ(ಜೆಡಿಯು), ಕನಿಮೋಳಿ(ಡಿಎಂಕೆ),ಸುಪ್ರಿಯಾ ಸುಲೆ(ಎನ್‌ಸಿಪಿ) ಮತ್ತು ಶ್ರೀಕಾಂತ ಶಿಂದೆ(ಶಿವಸೇನೆ)ಅವರು ತಲಾ ಒಂದು ನಿಯೋಗದ ನೇತೃತ್ವವನ್ನು ವಹಿಸಲಿದ್ದಾರೆ ಎಂದು ಸರಕಾರವು ಶನಿವಾರ ಪ್ರಕಟಿಸಿದೆ.

ಕಾಂಗ್ರೆಸ್‌ನ ಸಂಭಾವ್ಯ ಪ್ರತಿನಿಧಿಗಳಲ್ಲಿ ತರೂರ್,ಮನೀಶ ತಿವಾರಿ, ಸಲ್ಮಾನ್ ಖುರ್ಷಿದ್ ಮತ್ತು ಅಮರ್ ಸಿಂಗ್ ಇರಲಿದ್ದಾರೆ ಎಂಬ ಊಹಿಸಲಾಗಿತ್ತು. ಆದರೆ ಕಾಂಗ್ರೆಸ್ ಸಲ್ಲಿಸಿದ್ದ ಪಟ್ಟಿಯಲ್ಲಿ ತರೂರ್ ಹೆಸರು ಇರಲಿಲ್ಲ.

ಇದನ್ನು ದೃಢಪಡಿಸಿರುವ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಜೈರಾಮ ರಮೇಶ ಅವರು,ಮಾಜಿ ಕೇಂದ್ರ ಸಚಿವ ಆನಂದ ಶರ್ಮಾ, ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ ಗೊಗೊಯಿ ಹಾಗೂ ಸಂಸದರಾದ ಡಾ.ಸೈಯದ್ ನಾಸೀರ್ ಹುಸೇನ್ ಮತ್ತು ರಾಜಾ ಬ್ರಾರ್ ಅವರನ್ನು ತನ್ನ ಪ್ರತಿನಿಧಿಗಳಾಗಿ ಪಕ್ಷವು ಹೆಸರಿಸಿತ್ತು ಎಂದು ಶನಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ನಡುವೆ ಸರಕಾರದಿಂದ ನಾಲ್ವರು ಕಾಂಗ್ರೆಸ್ ಸಂಸದರ, ವಿಶೇಷವಾಗಿ ತರೂರ್ ಮತ್ತು ತಿವಾರಿ ಆಯ್ಕೆಯ ಬಗ್ಗೆ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ರಾಹುಲ್ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಅವರೊಂದಿಗೆ ಮಾತನಾಡಿ ಕೇಂದ್ರವು ಆಯ್ಕೆ ಮಾಡಿರುವ ಹೆಸರುಗಳಿಗೆ ತನ್ನ ಅಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಾಸಂಗಿಕವಾಗಿ,ಮೋದಿ ಸರಕಾರವು ಭಾರತ-ಪಾಕ್ ಸಂಘರ್ಷವನ್ನು ನಿರ್ವಹಿಸಿದ್ದ ರೀತಿ ಮತ್ತು ಕದನ ವಿರಾಮವನ್ನು ಪ್ರಕಟಿಸುವಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಸ್ತಕ್ಷೇಪವನ್ನು ಅನುಮೋದಿಸಿದ್ದ ತರೂರ್ ಹೇಳಿಕೆಗಳಿಂದ ಕಾಂಗ್ರೆಸ್ ನಾಯಕತ್ವವು ಅಂತರವನ್ನು ಕಾಯ್ದುಕೊಂಡಿತ್ತು. ಈ ವಿಷಯದಲ್ಲಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಕಾಂಗ್ರೆಸ್ ಪ್ರಶ್ನಿಸಿತ್ತಾದರೂ,ವಾಸ್ತವದಲ್ಲಿ 1990ರಿಂದಲೂ ಭಾರತ ಮತ್ತು ಪಾಕಿಸ್ತಾನ ನಡುವೆ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ನಡೆಯುತ್ತಲೇ ಬಂದಿದೆ ಎಂದು ಪ್ರತಿಪಾದಿಸಿದ್ದ ಮನೀಶ ತಿವಾರಿ,ಯುಪಿಎ ಆಡಳಿತಾವಧಿಯಲ್ಲಿಯೂ ಅಂತಹ ಹಲವಾರು ನಿದರ್ಶನಗಳನ್ನು ಉಲ್ಲೇಖಿಸಿದ್ದರು.

ನಿಯೋಗಗಳಿಗೆ ಸಂಸದರನ್ನು ಆಯ್ಕೆ ಮಾಡುವಾಗ ಸರಕಾರವು ಪಕ್ಷಗಳೊಂದಿಗೆ ಸಮಾಲೋಚಿಸಿಲ್ಲ. ಪ್ರತಿಪಕ್ಷ ಮತ್ತು ಆಡಳಿತ ಪಕ್ಷ ಸಂಸದರ ಪಟ್ಟಿಯನ್ನು ಪ್ರಧಾನಿ ಕಚೇರಿಯು ಸಿದ್ಧಗೊಳಿಸಿದೆ ಮತ್ತು ಅದನ್ನು ಆಯಾ ರಾಜಕೀಯ ಪಕ್ಷಗಳಿಗೆ ತಿಳಿಸಲಾಗಿದೆ ಎಂದು ಪ್ರತಿಪಕ್ಷ ಸಂಸದರೋರ್ವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ಶುಕ್ರವಾರ ವರದಿ ಮಾಡಿತ್ತು.

ಪ್ರತಿ ನಿಯೋಗವು ಐದು ದೇಶಗಳಿಗೆ ಭೇಟಿ ನೀಡಬಹುದು ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಸಂಸದರಲ್ಲಿ ಅಪರಾಜಿತಾ ಸಾರಂಗಿ,ಸಮಿಕ್ ಭಟ್ಟಾಚಾರ್ಯ, ಮಾಜಿ ಕೇಂದ್ರ ಸಚಿವರಾದ ಅನುರಾಗ ಠಾಕೂರ್ ಮತ್ತು ವಿ.ಮುರಳೀಧರನ್ ಸೇರಿದ್ದರೆ,ಸುದೀಪ ಬಂಡೋಪಾಧ್ಯಾಯ (ಟಿಎಂಸಿ),ಜಾನ್ ಬ್ರಿಟ್ಟಾಸ್(ಸಿಪಿಎಂ),ಅಸದುದ್ದೀನ್ ಉವೈಸಿ(ಎಐಎಂಐಎಮ್) ಮತ್ತು ಸಸ್ಮಿತ್ ಪಾತ್ರಾ(ಬಿಜೆಡಿ) ಅವರೂ ನಿಯೋಗಗಳ ಸದಸ್ಯರಾಗಿರುವ ಸಾಧ್ಯತೆಯಿದೆ.

ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರೂ ನಿಯೋಗಗಳ ಭಾಗವಾಗಲಿದ್ದಾರೆ ಎಂದು ಮೂಲಗಳು ತಿಳಿಸಿದ್ದು,ಇದನ್ನು ಹಲವಾರು ಪ್ರತಿಪಕ್ಷಗಳು ಸ್ವಾಗತಿಸಿವೆ.

ಸರ್ವಪಕ್ಷ ನಿಯೋಗಗಳು ಭಾರತದ ರಾಷ್ಟ್ರೀಯ ಒಮ್ಮತ ಹಾಗೂ ಭಯೋತ್ಪಾದನೆಯನ್ನು ಅದರ ಎಲ್ಲ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಎದುರಿಸುವ ದೃಢಸಂಕಲ್ಪವನ್ನು ಬಿಂಬಿಸಲಿವೆ. ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ದೇಶದ ಬಲವಾದ ಸಂದೇಶವನ್ನು ಈ ನಿಯೋಗಗಳು ಜಗತ್ತಿಗೆ ಸಾರಲಿವೆ. ಆಪರೇಷನ್ ಸಿಂಧೂರ ಮತ್ತು ಗಡಿಯಾಚೆಯ ಭಯೋತ್ಪಾದನೆಯ ವಿರುದ್ಧ ಭಾರತದ ನಿರಂತರ ಹೋರಾಟದ ಸಂದರ್ಭದಲ್ಲಿ ಏಳು ಸರ್ವಪಕ್ಷ ನಿಯೋಗಗಳು ಈ ತಿಂಗಳ ಕೊನೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯರು ಸೇರಿದಂತೆ ಪ್ರಮುಖ ಪಾಲುದಾರ ದೇಶಗಳಿಗೆ ಭೇಟಿ ನೀಡಲಿವೆ. ಪ್ರತಿ ನಿಯೋಗದೊಂದಿಗೆ ಗಣ್ಯ ರಾಜತಾಂತ್ರಿಕರೂ ಇರಲಿದ್ದಾರೆ.

ಕಿರಣ್ ರಿಜಿಜು‌, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News