×
Ad

ಜಮ್ಮು-ಕಾಶ್ಮೀರ: ಎಲ್‌ಒಸಿಯ 8 ಮುಂಚೂಣಿ ವಲಯಗಳಲ್ಲಿ ಪಾಕಿಸ್ತಾನ ಸೇನೆಯಿಂದ ಗುಂಡಿನ ದಾಳಿ

Update: 2025-05-05 22:04 IST

Photo Credit: PTI

ಜಮ್ಮು: ಜಮ್ಮು ಹಾಗೂ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ 8 ಮಂಚೂಣಿ ವಲಯಗಳಲ್ಲಿ ಪಾಕಿಸ್ತಾನದ ಸೇನಾ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಎಪ್ರಿಲ್ 22ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನದ ಸೇನಾ ಪಡೆ 11ನೇ ದಿನವಾದ ರವಿವಾರ ತಡ ರಾತ್ರಿ ಕೂಡ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.

‘‘ಮೇ 4 ಹಾಗೂ 5ರ ನಡುವಿನ ರಾತ್ರಿ ಪಾಕಿಸ್ತಾನದ ಸೇನಾ ಠಾಣೆಗಳು ಸಣ್ಣ ಶಸ್ತ್ರಾಸ್ತ್ರಗಳನ್ನು ಬಳಸಿ ಜಮ್ಮು ಹಾಗೂ ಕಾಶ್ಮೀರದ ಕುಪ್ವಾರ, ಬಾರಾಮುಲ್ಲಾ, ಪೂಂಛ್, ರಾಜೌರಿ, ಮೆಂಡರ್, ನೌಶೇರಾ, ಸುಂದರ್‌ಬನಿ ಹಾಗೂ ಅಖ್ನೂರ್ ಎದುರಿಗಿರುವ ಪ್ರದೇಶದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ’’ ಎಂದು ಜಮ್ಮುವಿನ ರಕ್ಷಣಾ ವಕ್ತಾರ ತಿಳಿಸಿದ್ದಾರೆ.

ಪಾಕಿಸ್ತಾನದ ಈ ಅಪ್ರಚೋದಿತ ಗುಂಡಿನ ದಾಳಿಗೆ ಭಾರತದ ಸೇನೆ ಸೂಕ್ತ ಪ್ರತ್ಯುತ್ತರ ನೀಡಿದೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನ ಸೇನಾ ಪಡೆ ಐದು ಗಡಿ ಜಿಲ್ಲೆಗಳಾದ ಜಮ್ಮು ವಲಯದ ಪಿರ್ ಪಂಜಾಲ್ ಶ್ರೇಣಿಯ ದಕ್ಷಿಣದಲ್ಲಿರುವ ಜಮ್ಮು, ರಾಜೌರಿ ಹಾಗೂ ಪೂಂಚ್, ಕಾಶ್ಮೀರ ಕಣಿವೆಯ ಬಾರಮುಲ್ಲಾ ಹಾಗೂ ಕುಪ್ವಾರದಲ್ಲಿ ರಾತ್ರೋರಾತ್ರಿ ಗುಂಡಿನ ದಾಳಿ ಆರಂಭಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News