ಸತತ ಎಂಟನೇ ದಿನವೂ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ
Photo : PTI
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಐದು ಜಿಲ್ಲೆಗಳ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಅಂತರರಾಷ್ಟ್ರೀಯ ಗಡಿ ಉದ್ದಕ್ಕೂ ಪಾಕಿಸ್ತಾನಿ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಸೇನೆಯು ಪ್ರತಿದಾಳಿ ನಡೆಸಿದೆ.
ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ನಂತರ ಹೆಚ್ಚಿದ ಉದ್ವಿಗ್ನತೆಯ ನಡುವೆ, ಎಲ್‌ಒಸಿ ಉದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ನಡೆಯುತ್ತಿರುವುದು ಇದು ಎಂಟನೇ ಬಾರಿ.
ಗಡಿಯಲ್ಲಿ ಶೆಲ್ ದಾಳಿ ಹೆಚ್ಚಾದರೆ ವಾಸಿಸಲು ನಾಗರಿಕರು ತಮ್ಮ ಸಮುದಾಯದ ಮತ್ತು ವೈಯಕ್ತಿಕ ಬಂಕರ್ ಗಳನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದ್ದಾರೆ.
“ಮೇ 1-2, 2025 ರ ರಾತ್ರಿ, ಪಾಕಿಸ್ತಾನಿ ಸೇನಾ ಠಾಣೆಗಳು ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ, ಪೂಂಚ್, ನೌಶೇರಾ ಮತ್ತು ಅಖ್ನೂರ್ ಪ್ರದೇಶಗಳ ಎದುರು ಎಲ್‌ಒಸಿಯಾದ್ಯಂತ ಅಪ್ರಚೋದಿತ ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ದಾಳಿ ನಡೆಸಿದವು. ಭಾರತೀಯ ಸೇನಾ ಪಡೆಗಳು ಅದಕ್ಕೆ ತಕ್ಕುದಾದ ಪ್ರತಿಕ್ರಿಯೆ ನೀಡಿದೆ”, ಎಂದು ಜಮ್ಮುವಿನ ರಕ್ಷಣಾ ವಕ್ತಾರರು ತಿಳಿಸಿದ್ದಾರೆ.