×
Ad

ಹಜ್ ಕೋಟಾ ಭಾರೀ ಕಡಿತ | ಸೌದಿ ಜೊತೆ ಮಾತುಕತೆ ಮಾಡಿ : ವಿದೇಶಾಂಗ ಸಚಿವರಿಗೆ ವಿಪಕ್ಷ ನಾಯಕರ ಆಗ್ರಹ

Update: 2025-04-14 13:41 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಭಾರತದ ಹಜ್ ಕೋಟಾವನ್ನು ಹಠಾತ್ ಕಡಿತಗೊಳಿಸಿರುವ ಸೌದಿ ಸರಕಾರದ ನಿರ್ಧಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಸೀರ್ ಹುಸೇನ್, ಈ ಕುರಿತು ಸೌದಿ ಸರಕಾರದ ಜೊತೆ ಮಾತುಕತೆ ನಡೆಸಿ ಪರಿಹಾರವನ್ನು ಕಲ್ಪಿಸುವಂತೆ ವಿದೇಶಾಂಗ ಸಚಿವ ಎಸ್‌ ಜೈಶಂಕರ್ ಅವರಿಗೆ ಆಗ್ರಹಿಸಿದ್ದಾರೆ.

ಈ ಕುರಿತು ರಾಜ್ಯಸಭಾ ಸಂಸದ, ಕಾಂಗ್ರೆಸ್‌ ನಾಯಕ ನಾಸೀರ್ ಹುಸೇನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, 52,000 ಭಾರತೀಯ ಯಾತ್ರಿಕರ ಹಜ್ ಸೀಟುಗಳನ್ನು ಪಾವತಿ ಮಾಡಿ ಕಾಯ್ದಿರಿಸಿದ ಹೊರತಾಗಿಯೂ ರದ್ದುಗೊಳಿಸಲಾಗಿದೆ ಎಂದು ತಿಳಿದು ಆಘಾತವಾಯಿತು. ಈ ಕುರಿತು ಪರಿಹಾರವನ್ನು ಕಂಡುಕೊಳ್ಳಲು ಮತ್ತು ಹಜ್ ಯಾತ್ರೆಗೆ ಅನುವು ಮಾಡಿಕೊಡಲು ಸೌದಿ ಅಧಿಕಾರಿಗಳೊಂದಿಗೆ ತಕ್ಷಣ ಮಾತುಕತೆಯನ್ನು ನಡೆಸಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್ ಅವರಿಗೆ ಆಗ್ರಹಿಸಿದ್ದಾರೆ.

ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಈ ಕುರಿತು ಪ್ರತಿಕ್ರಿಯಿಸಿ, ಸೌದಿ ಅರೇಬಿಯಾದಿಂದ ಗೊಂದಲದ ಸುದ್ದಿ ಹೊರಬಂದಿದೆ. ಭಾರತದ ಖಾಸಗಿ ಹಜ್ ಕೋಟಾದ ಶೇಕಡಾ 80ರಷ್ಟು ಹಠಾತ್ ಕಡಿತಗೊಂಡಿದೆ ಎಂದು ವರದಿಗಳು ಸೂಚಿಸುತ್ತವೆ. ಈ ಹಠಾತ್ ನಿರ್ಧಾರವು ದೇಶಾದ್ಯಂತ ಯಾತ್ರಿಕರು ಮತ್ತು ಪ್ರವಾಸ ನಿರ್ವಾಹಕರಿಗೆ ಅಪಾರ ತೊಂದರೆಯನ್ನುಂಟುಮಾಡುತ್ತಿದೆ ಎಂದು ಹೇಳಿದ್ದಾರೆ.

ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಕ್ಷಣ ಮಧ್ಯಪ್ರವೇಶಿಸಿ ಸೌದಿ ಸರಕಾರ ಜೊತೆ ಮಾತುಕತೆ ನಡೆಸಬೇಕು. ಸೂಕ್ತ ಪರಿಹಾರವನ್ನು ಕಲ್ಪಿಸಬೇಕು ಎಂದು ಮೆಹಬೂಬಾ ಮುಫ್ತಿ ಆಗ್ರಹಿಸಿದ್ದಾರೆ.

ಹಜ್ ಯಾತ್ರೆಗೆ ಖಾಸಗಿ ಕೋಟಾದಡಿ ಮುಂಗಡ ಕಾಯ್ದಿರಿಸಿರುವವರ ಪೈಕಿ ಶೇ. 20ರಷ್ಟು ಯಾತ್ರಾರ್ಥಿಗಳ ಹಜ್ ಯಾತ್ರೆಯನ್ನು ಮಾತ್ರ ದೃಢಪಡಿಸಲಾಗಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಸುತ್ತೋಲೆ ಹೊರಡಿಸಿತ್ತು. ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಈ ಬಾರಿಯ ಹಜ್ ಯಾತ್ರೆಗೆ ಸೀಟು ಕಾಯ್ದಿರಿಸಿದ್ದ ಸುಮಾರು 52,000 ಭಾರತೀಯರಿಗೆ ಇದರಿಂದ ಸಮಸ್ಯೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News