ಆರೋಗ್ಯ ಸಚಿವಾಲಯ ಅಧಿಕಾರಿಯ ಸೋಗಿನಲ್ಲಿ ದಿಲ್ಲಿಯಲ್ಲಿ ಜನರಿಗೆ 15 ಕೋಟಿ ರೂ.ವಂಚನೆ!
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕಾರಿಯ ಸೋಗು ಹಾಕಿದ್ದ ಮತ್ತು ಜನರಿಗೆ 15 ಕೋಟಿ ರೂ.ಗಳನ್ನು ವಂಚಿಸಿದ್ದ ವ್ಯಕ್ತಿಯನ್ನು ದಿಲ್ಲಿ ಪೋಲಿಸ್ ನ ಆರ್ಥಿಕ ಅಪರಾಧಗಳ ಘಟಕವು ಬಂಧಿಸಿದೆ.
ಒಡಿಶಾ ನಿವಾಸಿ ಪ್ರಫುಲ್ ಕುಮಾರ ನಾಯಕ್ (48) ಬಂಧಿತ ಆರೋಪಿಯಾಗಿದ್ದಾನೆ.
2021ರಲ್ಲಿ ಸಾಂಕ್ರಾಮಿಕದ ಸಂದರ್ಭದಲ್ಲಿ ವಿವಿಧ ರಾಜ್ಯಗಳಿಗೆ ಕೋವಿಡ್ ಲಸಿಕೆಗಳ ಸಾಗಣೆಗಾಗಿ ಕಾರ್ಯಾದೇಶಗಳನ್ನು ದೊರಕಿಸುವ ನೆಪದಲ್ಲಿ ತನಗೆ ನಾಲ್ಕು ಕೋಟಿ ರೂ.ಗಳನ್ನು ವಂಚಿಸಲಾಗಿದೆ ಎಂದು ಸುನಿಲ ಕೌಶಿಕ್ ಎನ್ನುವವರು ದೂರು ಸಲ್ಲಿಸಿದ್ದರು.
ಇಂತಹುದೇ ಇನ್ನೂ ನಾಲ್ಕು ದೂರುಗಳು ಬಂದಿದ್ದವು. ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು ಮತ್ತು ವಂಚಿಸಲಾದ ಒಟ್ಟು ಮೊತ್ತ 15 ಕೋಟಿ ರೂ.ಗಳನ್ನು ದಾಟಿತ್ತು ಎಂದು ಹೆಚ್ಚುವರಿ ಪೋಲಿಸ್ ಆಯುಕ್ತ ಅಮೃತಾ ಗುಗುಲೋತ್ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಆರೋಪಿ ಮತ್ತು ಆತನ ಸಹಚರ ದೂರುದಾರರನ್ನು ಸಂಪರ್ಕಿಸಿ ರಾಜ್ಯಗಳಿಗೆ ಕೋವಿಡ್ ಲಸಿಕೆಗಳ ಸಾಗಣೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕಾರ್ಯಾದೇಶಗಳನ್ನು ಕೊಡಿಸುವುದಾಗಿ ನಂಬಿಸಿ ಹಣವನ್ನು ಪಡೆದುಕೊಂಡು ಬಳಿಕ ಅವರನ್ನು ವಂಚಿಸಿದ್ದರು.
ಪ್ರಮುಖ ಆರೋಪಿ ಮತ್ತು ಆರೋಗ್ಯ ಸಚಿವಾಲಯದ ಇಬ್ಬರು ಸಿಬ್ಬಂದಿಗಳು ಸೇರಿದಂತೆ ಎಂಟು ಜನರನ್ನು 2022ರಲ್ಲಿ ಬಂಧಿಸಲಾಗಿತ್ತು. ಆಗಿನಿಂದ ತಲೆ ಮರೆಸಿಕೊಂಡಿದ್ದ ನಾಯಕ್‌ನನ್ನು 2025, ಜ.21ರಂದು ಬಂಧಿಸಲಾಗಿದೆ.