×
Ad

ಜನಪ್ರತಿನಿಧಿಗಳು ಕೂಡಾ ದಿನಕ್ಕೆ 12-15 ತಾಸು ದುಡಿಯುತ್ತಾರೆ: ಮನೀಶ್ ತಿವಾರಿ

Update: 2023-11-10 23:08 IST

ಮನೀಶ್ ತಿವಾರಿ Photo- PTI

ಹೊಸದಿಲ್ಲಿ: ವಾರದಲ್ಲಿ 70 ತಾಸುಗಳ ದುಡಿಯಬೇಕೆಂಬ ಇನ್ಫೋಸಿಸ್ ವರಿಷ್ಠ ನಾರಾಯಣಮೂರ್ತಿ ಅವರ ಸಲಹೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಅವರು ತನ್ನಂತಹ ಹಲವಾರು ಜನಪ್ರತಿನಿಧಿಗಳು ದಿನದಲ್ಲಿ 12-15 ತಾಸುಗಳ ಕಾಲ ಕೆಲಸ ಮಾಡುತ್ತಿರುತ್ತಾರೆ ಎಂದು ಹೇಳಿದ್ದಾರೆ.

‘‘ವಾರದಲ್ಲಿ 70 ತಾಸುಗಳ ದುಡಿಮೆ ಕುರಿತು ಇನ್‌ಫೋಸಿಸ್‌ನ ನಾರಾಯಣ ಮೂರ್ತಿ ಅವರ ಹೇಳಿಕೆಯ ಬಗ್ಗೆ ಯಾಕೆ ಇಷ್ಟೊಂದು ಗದ್ದಲ ಉಂಟಾಗುತ್ತಿದೆಯೆಂದು ನನಗೆ ತಿಳಿಯುತ್ತಿಲ್ಲ. ಅಷ್ಟು ಹೊತ್ತುಗಳ ಕಾಲ ದುಡಿಯುವುದರಲ್ಲಿ ತಪ್ಪೇನಿದೆ?’’ ಎಂದು ನಾರಾಯಣ ಮೂರ್ತಿ ಸಾಮಾಜಿಕ ಜಾಲತಾಣ ‘x’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘‘ ಒಂದು ವೇಳೆ ಭಾರತವನ್ನು ನಿಜಕ್ಕೂ ಒಂದು ಮಹಾನ್‌ ಶಕ್ತಿಯಾಗಿ ರೂಪಿಸಬೇಕಾದರೆ, ಎರಡು ತಲೆಮಾರುಗಳು ಜನರೂ ವಾರದಲ್ಲಿ 70 ತಾಸುಗಳ ದುಡಿಮೆಯನ್ನು ವೃತ್ತಿ ನೈತಿಕತೆಯಾಗಿ ರೂಢಿಸಿಕೊಳ್ಳಬೇಕಾಗಿದೆ. ವಾರದಲ್ಲಿ 70 ತಾಸುಗಳ ದುಡಿಮೆ ಹಾಗೂ ಒಂದು ದಿನದ ಬಿಡುವು ಹಾಗೂ ವರ್ಷದಲ್ಲಿ 15 ದಿನಗಳ ರಜೆ, ಇವು ಒಂದು ಪದ್ಧತಿಯಾಗಬೇಕಾಗಿದೆ” ಎಂದರು.

ಇನ್‌ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ ಅವರು ಕಳೆದವಾರ ಆನ್‌ಲೈನ್ ಚರ್ಚಾ ಕಾರ್ಯಕ್ರಮವೊದರಲ್ಲಿ ಪಾಲ್ಗೊಂಡು ಮಾತನಾಡಿದ ಸಂದರ್ಭ ಭಾರತದಲ್ಲಿ ಉದ್ಯೋಗಿಗಳು ವಾರದಲ್ಲಿ 70 ತಾಸುಗಳ ಕಾಲ ದುಡಿಯಬೇಕೆಂದು ಪ್ರತಿಪಾದಿಸಿದ್ದರು. ‘‘ಉದ್ಯೋಗದ ಉತ್ಪಾದಕತೆಯು ಅತ್ಯಂತ ಕಡಿಮೆ ಇರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ನಾವು ನಮ್ಮ ದುಡಿಮೆಯ ಉತ್ಪಾದಕತೆಯನ್ನು ಸುಧಾರಣೆಗೊಳಿಸದೆ ಇದ್ದಲ್ಲಿ, ನಮಗೆ ಅದ್ಭುತವಾದ ಪ್ರಗತಿಯನ್ನು ಕಂಡಿರುವ ದೇಶಗಳ ಜೊತೆ ಸ್ಪರ್ಧಿಸಲು ಸಾಧ್ಯವಿಲ್ಲ. ಹೀಗಾಗಿ, ನಮ್ಮ ಯುವಜನರು, ಇದು ನನ್ನ ದೇಶ, ನಾನು ವಾರದಲ್ಲಿ 70 ತಾಸುಗಳ ಕಾಲ ದುಡಿಯಲು ಇಷ್ಟಪಡುತ್ತೇನೆ’’ ಎಂದು ಹೇಳಬೇಕು ಎಂಬುದಾಗಿ ಇನ್‌ಫೋಸಿಸ್‌ನ ಸಂಸ್ಧಾಪಕರು ತಿಳಿಸಿದ್ದರು.

ಇನ್‌ಫೋಸಿಸ್‌ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ್ ದಾಸ್ ಪೈ ನಿರೂಪಿಸಿದ ಪಾಡ್‌ಕಾಸ್ಟ್ ಚರ್ಚಾಗೋಷ್ಠಿಯಲ್ಲಿ ನಾರಾಯಣ ಮೂರ್ತಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News