ಏರ್ ಇಂಡಿಯಾ 171 ವಿಮಾನ ಅಪಘಾತಕ್ಕೆ ಪೈಲಟ್ ತಪ್ಪು ಕಾರಣ: ವಾಲ್ ಸ್ಟ್ರೀಟ್ ಜರ್ನಲ್ ವರದಿಯನ್ನು ಖಂಡಿಸಿದ ಭಾರತೀಯ ಪೈಲಟ್‌ಗಳ ಒಕ್ಕೂಟ
PC : PTI
ಹೊಸದಿಲ್ಲಿ: ಅಹ್ಮದಾಬಾದ್ ನಿಂದ ಲಂಡನ್ ಗೆ ಹೋಗುತ್ತಿದ್ದ ಏರ್ ಇಂಡಿಯಾದ ಎಐ-171 ವಿಮಾನದ ಅಪಘಾತಕ್ಕೆ ಸಂಬಂಧಿಸಿ ‘ವಾಲ್ ಸ್ಟ್ರೀಟ್ ಜರ್ನಲ್’ನಲ್ಲಿ ಪ್ರಕಟಗೊಂಡಿರುವ ಹೊಸ ವರದಿಯನ್ನು ಭಾರತೀಯ ಪೈಲಟ್‌ಗಳ ಒಕ್ಕೂಟ (ಎಫ್‌ಐಪಿ) ಖಂಡಿಸಿದೆ.
ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ನ ಸ್ಥಾನದ ಆಧಾರದಲ್ಲಿ, ‘‘ಪೈಲಟ್‌ನ ತಪ್ಪಿನಿಂದಾಗಿ’’ ವಿಮಾನ ಅಪಘತ ಸಂಭವಿಸಿದೆ ಎಂದು ಹೇಳಲು ವರದಿ ಪ್ರಯತ್ನಿಸುತ್ತಿದೆ ಎಂದು ಅದು ಆರೋಪಿಸಿದೆ.
ವರದಿಯನ್ನು ಉಲ್ಲೇಖಿಸಿರುವ ಒಕ್ಕೂಟದ ಅಧ್ಯಕ್ಷ ಸಿ.ಎಸ್. ರಾಂಧವ, ಕಳೆದ ವಾರ ಬಿಡುಗಡೆಯಾಗಿರುವ ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ)ಯ ಪ್ರಾಥಮಿಕ ತನಿಖಾ ವರದಿಯು ಯಾವುದೇ ಪೈಲಟ್ ನ ಮೇಲೆ ದೋಷವನ್ನು ಹೊರಿಸಿಲ್ಲ ಎಂದು ಹೇಳಿದ್ದಾರೆ.
‘‘ಇಂಧನ ನಿಯಂತ್ರಣ ಸ್ವಿಚ್ ಪೈಲಟ್ ನ ತಪ್ಪಿನಿಂದಾಗಿ ಪಲ್ಲಟಗೊಂಡಿದೆ ಎನ್ನುವುದನ್ನು ವರದಿಯಲ್ಲಿ ಎಲ್ಲೂ ಉಲ್ಲೇಖಿಸಲಾಗಿಲ್ಲ. ನಾನು ‘ವಾಲ್ ಸ್ಟ್ರೀಟ್ ಜರ್ನಲ್’ನ ವರದಿಯನ್ನು ಖಂಡಿಸುತ್ತೇನೆ. ಪೈಲಟ್ ನ ತಪ್ಪಿನಿಂದಾಗಿ ಅಪಘಾತ ಸಂಭವಿಸಿದೆ ಎಂದು ವರದಿಯು ಹೇಳಿದೆ. ಅವರು ವರದಿಯನ್ನು ಸರಿಯಾಗಿ ಓದಿಲ್ಲ. ನಾವು ಒಕ್ಕೂಟದ ಮೂಲಕ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ’’ ಎಂದು ರಾಂಧವ ಹೇಳಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಜೂನ್ 12ರಂದು 242 ಮಂದಿಯನ್ನು ಹೊತ್ತು ಮಧ್ಯಾಹ್ನ 1:38ಕ್ಕೆ ಅಹ್ಮದಾಬಾದ್ ಹಾರಾಟ ಆರಂಭಿಸಿದ ಎಐ-171 ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವು ಒಂದು ನಿಮಿಷದ ಬಳಿಕ ವಿಮಾನ ನಿಲ್ದಾಣದ ಆವರಣ ಗೋಡೆಯ ಹೊರಗೆ ವೈದ್ಯಕೀಯ ಕಾಲೇಜೊಂದರ ಮೇಲೆ ಅಪ್ಪಳಿಸಿತ್ತು. ದುರಂತದಲ್ಲಿ ವಿಮಾನದಲ್ಲಿದ್ದ 241 ಮಂದಿ, ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಮತ್ತು ಆ ಪ್ರದೇಶದಲ್ಲಿದ್ದ ಇತರರು ಸೇರಿದಂತೆ ಕನಿಷ್ಠ 260 ಮಂದಿ ಮೃತಪಟ್ಟಿದ್ದಾರೆ. ವಿಮಾನದಲ್ಲಿದ್ದ ಓರ್ವ ಪ್ರಯಾಣಿಕ ಪವಾಡ ಸದೃಶರಾಗಿ ಬದುಕುಳಿದಿದ್ದಾರೆ.
ವಿಮಾನವನ್ನು ಪೈಲಟ್‌ಗಳಾದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮತ್ತು ಫಸ್ಟ್ ಆಫಿಸರ್ ಕ್ಲೈವ್ ಕುಂದರ್ ಚಲಾಯಿಸುತ್ತಿದ್ದರು.
ವಿಮಾನದ ಬ್ಲ್ಯಾಕ್ ಬಾಕ್ಸ್ ನಿಂದ ಪಡೆದ ದತ್ತಾಂಶಗಳ ಪ್ರಕಾರ, ವಿಮಾನದ ಇಂಧನ ನಿಯಂತ್ರಣ ಸ್ವಿಚ್ ‘‘ರನ್’’ (ಇಂಧನ ಪೂರೈಕೆ)ನಿಂದ ‘‘ಕಟ್-ಆಫ್’’ (ಇಂಧನ ಪೂರೈಕೆ ಸ್ಥಗಿತ)ಗೆ ಪಲ್ಲಟಗೊಂಡಿತ್ತು ಎಂಬುದಾಗಿ ಪ್ರಾಥಮಿಕ ವರದಿ ಹೇಳಿದೆ. ಜೊತೆಗೆ ವಿಮಾನ ಅಪ್ಪಳಿಸುವ ಕೆಲವೇ ಸೆಕೆಂಡ್‌ಗಳ ಮೊದಲು ಪೈಲಟ್ ಗಳ ನಡುವೆ ನಡೆದ ಸಂಭಾಷಣೆಯ ತುಣುಕುಗಳನ್ನೂ ವರದಿ ಬಹಿರಂಗಗೊಳಿಸಿದೆ. ‘‘ನೀವು ಯಾಕೆ ಇಂಧನ ಪೂರೈಕೆಯನ್ನು ನಿಲ್ಲಿಸಿದಿರಿ?’’ ಎಂಬುದಾಗಿ ಓರ್ವ ಪೈಲಟ್ ಇನ್ನೊಬ್ಬರನ್ನು ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಇನ್ನೋರ್ವ ಪೈಲಟ್, ‘‘ಇಲ್ಲ, ನಾನು ಹಾಗೆ ಮಾಡಿಲ್ಲ’’ ಎಂದುತ್ತರಿಸುತ್ತಾರೆ ಎಂದು ವರದಿ ಹೇಳಿದೆ.
ಬಳಿಕ, ಇಂಧನ ಸ್ವಿಚನ್ನು ‘‘ರನ್’’ಗೆ ತಿರುಗಿಸಲಾಯಿತಾದರೂ, ಆಗ ಸಮಯ ಮೀರಿತ್ತು. ವಿಮಾನ ಕಡಿಮೆ ಎತ್ತರದಲ್ಲಿದ್ದುದರಿಂದ, ಅದರ ಇಂಜಿನ್‌ಗಳು ಮತ್ತೊಮ್ಮೆ ಚಾಲನೆಗೊಳ್ಳುವುದಕ್ಕೆ ಮುನ್ನವೇ ವಿಮಾನವು ಪತನಗೊಂಡಿತು.
ಬುಧವಾರ ಪ್ರಕಟಗೊಂಡಿರುವ ‘ವಾಲ್ ಸ್ಟ್ರೀಟ್ ಜರ್ನಲ್’ನ ವರದಿಯು ಪೈಲಟ್ ಗಳ ತಪ್ಪಿನತ್ತ ಬೆಟ್ಟು ಮಾಡಿದೆ. ‘‘ವಿಮಾನದ ಇಬ್ಬರು ಪೈಲಟ್‌ಗಳ ನಡುವಿನ ಸಂಭಾಷಣೆಯು, ವಿಮಾನದ ಅವಳಿ ಇಂಜಿನ್ ಗಳಿಗೆ ಇಂಧನದ ಹರಿವನ್ನು ನಿಯಂತ್ರಿಸುವ ಸ್ವಿಚ್‌ಗಳನ್ನು ‘ಕಟ್-ಆಫ್’ಗೆ ತಿರುಗಿಸಿದ್ದು ಕ್ಯಾಪ್ಟನ್ ಎನ್ನುವುದನ್ನು ಸೂಚಿಸುತ್ತದೆ ಎಂಬುದಾಗಿ ಪುರಾವೆಯ ವಿಶ್ಲೇಷಣೆ ನಡೆಸಿರುವ ಅಮೆರಿಕದ ಅಧಿಕಾರಿಗಳು ಹೇಳುತ್ತಾರೆ’’ ಎಂದು ವರದಿ ಹೇಳುತ್ತದೆ.