ಆರೆಸ್ಸೆಸ್ ಗುಣಗಾನದೊಂದಿಗೆ ಇತಿಹಾಸ ವಿರೂಪಗೊಳಿಸಿದ ಪ್ರಧಾನಿ: ಪಿಣರಾಯಿ ವಿಜಯನ್ ಕಿಡಿ
ಪಿಣರಾಯಿ ವಿಜಯನ್ | PC : PTI
ಹೊಸದಿಲ್ಲಿ,ಆ.16: ಪ್ರಧಾನಿ ನರೇಂದ್ರ ಮೋದಿ ಅವರು ಹೊಸದಿಲ್ಲಿಯ ಕೆಂಪುಕೋಟೆಯಲ್ಲಿ ಶುಕ್ರವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರೆಸ್ಸೆಸನ್ನು ಪ್ರಶಂಸಿಸುವ ಮೂಲಕ ಇತಿಹಾಸವನ್ನು ವಿರೂಪಗೊಳಿಸಿದ್ದಾರೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಆಪಾದಿಸಿದ್ದಾರೆ.
ಮಹಾತ್ಮಾಗಾಂಧಿಯವರ ಹತ್ಯೆಯ ಬಳಿಕ ನಿಷೇಧಕ್ಕೊಳಗಾದ ಆರೆಸ್ಸೆಸ್ ಹಾಗೂ ಪ್ರಕರಣದಲ್ಲಿ ಹತ್ಯೆ ಸಂಚಿಗೆ ಸಂಬಂಧಿಸಿ ವಿಚಾರಣೆಯನ್ನೆದುರಿಸಿದ ವಿ.ಡಿ.ಸಾವರ್ಕರ್ ಅವರನ್ನು ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ಪ್ರಮುಖರೆಂದು ಬಿಂಬಿಲು ಯತ್ನಿಸಿರುವುದು ಇತಿಹಾಸದ ಘೋರ ವಿರೂಪವಾಗಿದೆ’’ ಎಂದು ವಿಜಯನ್ ಹೇಳಿದ್ದಾರೆ.
ಬ್ರಿಟಿಶರಿಗೆ ಸೇವೆ ಸಲ್ಲಿಸಿದವರನ್ನು ವೈಭವೀಕರಿಸಲು ಪ್ರಧಾನಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಯ್ಕೆ ಮಾಡಿರುವುದು ಸ್ವಾತಂತ್ರ್ಯ ಹೋರಾಟಕ್ಕೆ ಎಸಗಿದ ಅಪಮಾನವೆಂದು ಕೇರಳ ಮುಖ್ಯಮಂತ್ರಿ ತಿಳಿಸಿದ್ದಾರೆ.
‘‘ ಇಂತಹ ನಡೆಗಳು ವಿಭಜನವಾದಿ ರಾಜಕೀಯದ ವಿಷಕಾರಿ ಪರಂಪರೆಯನ್ನು ಹೊಂದಿರುವ ಆರೆಸ್ಸೆಸ್ ನ ನೈಜಬಣ್ಣವನ್ನು ಮರೆಮಾಚಲಾರವು’’ ಎಂದು ಅವರು ಹೇಳಿದ್ದಾರೆ.
ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿಯವರು ಆರೆಸ್ಸೆಸ್ ಅನ್ನು ಪ್ರಶಂಸಿಸಿರುವುದನ್ನು
ಎಐಎಂಐಎಂ ಪಕ್ಷದ ವರಿಷ್ಠ ಅಸಾದುದ್ದೀನ್ ಉವೈಸಿ ಟೀಕಿಸಿದ್ದು, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮಾಡಿದ ಅಪಮಾನ ಇದಾಗಿದೆ ಎಂದು ಹೇಳಿದ್ದಾರೆ. ಆರೆಸ್ಸೆಸ್ ಎಂದೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ. ವಾಸ್ತವಿಕವಾಗಿ ಅದು ಬ್ರಿಟಿಷರಿಗೆ ನೆರವಾಗಿತ್ತು ಎಂದವರು ಆಪಾದಿಸಿದ್ದಾರೆ.
‘‘ಆರೆಸ್ಸೆಸ್ ಯಾವತ್ತೂ ನಮ್ಮ ಪೂರ್ವಿಕರು ತಳಹದಿಹಾಕಿದಂತಹ ಎಲ್ಲರನ್ನೂ ಒಳಗೊಂಡ ರಾಷ್ಟ್ರವಾದವನ್ನು ವಿರೋಧಿಸುತ್ತಾ ಬಂದಿದೆ. ಪ್ರಧಾನಿಯವರು ಆರೆಸ್ಸೆಸ್ ಸದಸ್ಯನಾಗಿರುವುದರಿಂದ ಅವರು ಆರೆಸ್ಸೆಸ್ ನ ಮುಖ್ಯ ಕಚೇರಿಯನ್ನು ಸಂದರ್ಶಿಸುವುದಕ್ಕೆ ನನ್ನ ವಿರೋಧವಿಲ್ಲ. ಆದರೆ ಪ್ರಧಾನಿಯಾಗಿ ಭಾಷಣ ಮಾಡುವಾಗ ಇಂತಹ ವಿಚಾರಗಳನ್ನು ಅವರು ಪ್ರಸ್ತಾವಿಸಕೂಡದು’’ ಎಂದು ಉವೈಸಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ತನ್ನ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರೆಸ್ಸೆಸ್ ಜಗತ್ತಿನ ಅತಿ ದೊಡ್ಡ ಸರಕಾರೇತರ ಸಂಸ್ಥೆಯಾಗಿದ್ದು, 100 ವರ್ಷಗಳ ಸಮರ್ಪಣಾತ್ಮಕ ಇತಿಹಾಸವನ್ನು ಹೊಂದಿದೆ ಎಂದು ಹೇಳಿದ್ದರು.