ಮಹಾರಾಷ್ಟ್ರ | ದಾದರ್ ನ ಕಬೂತರ್ಖಾನಾದಲ್ಲಿ ಪಾರಿವಾಳಗಳಿಗೆ 2 ಗಂಟೆ ಆಹಾರ ನೀಡುವ ಯೋಜನೆ: ಬಾಂಬೆ ಹೈಕೋರ್ಟ್ ಗೆ ಮಾಹಿತಿ ನೀಡಿದ ಬಿಎಂಸಿ
PC : PTI
ಮುಂಬೈ: ದಾದರ್ ಖಬೂತರ್ಖಾನಾದಲ್ಲಿ ಬೆಳಗಿನ ಜಾವ ಷರತ್ತಿಗೆ ಒಳಪಟ್ಟಂತೆ ಪ್ರತಿ ನಿತ್ಯ ಎರಡು ಗಂಟೆಗಳ ಕಾಲ ಪಾರಿವಾಳಗಳಿಗೆ ನಿಯಂತ್ರಿತ ಪ್ರಮಾಣದ ಆಹಾರ ನೀಡಲು ಅವಕಾಶ ನೀಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಬುಧವಾರ ಬಾಂಬೆ ಹೈಕೋರ್ಟ್ ಗೆ ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ತಿಳಿಸಿತು.
ಆದರೆ, ಇಂತಹ ಅನುಮತಿ ಮಂಜೂರು ಮಾಡುವುದಕ್ಕೂ ಮುನ್ನ, ಸಾರ್ವಜನಿಕ ಆಕ್ಷೇಪಣೆಯನ್ನು ಆಹ್ವಾನಿಸಬೇಕು ಹಾಗೂ ದಾದರ್ ನ ಜನಪ್ರಿಯ ಸ್ಥಳವಾದ ಖಬೂತರ್ಖಾನಾದಲ್ಲಿ ಹಕ್ಕಿಗಳಿಗೆ ನಿಯಂತ್ರಿತ ಪ್ರಮಾಣದ ಆಹಾರ ನೀಡಲು ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾ. ಜಿ.ಎಸ್.ಕುಲಕರ್ಣಿ ಹಾಗೂ ನ್ಯಾ. ಆರಿಫ್ ಡಾಕ್ಟರ್ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯ ಪಟ್ಟಿತು.
ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ನಗರದಲ್ಲಿ ಖಬೂತರ್ಖಾನಾಗಳನ್ನು (ಪಾರಿವಾಳಗಳಿಗೆ ಆಹಾರ ನೀಡುವ ಸ್ಥಳಗಳು) ಮುಚ್ಚುವ ನಿರ್ಧಾರವನ್ನು ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಕೈಗೊಂಡಿದ್ದರೂ, ಆ ಸ್ಥಳಗಳ ಪಾವಿತ್ರ್ಯತೆಯನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂದು ಅರ್ಜಿಗಳ ಗುಚ್ಛದ ವಿಚಾರಣೆ ನಡೆಸಿದ ನ್ಯಾಯಪೀಠ ಸೂಚಿಸಿತು.
ಕಳೆದ ವಾರ ಪಾರಿವಾಳಗಳಿಗೆ ಆಹಾರ ನೀಡುವ ಜನಪ್ರಿಯ ಸ್ಥಳವಾದ ದಾದರ್ ಖಬೂತರ್ಖಾನಾದಲ್ಲಿ ಹಕ್ಕಿಗಳಿಗೆ ಧಾನ್ಯ ನೀಡುವುದನ್ನು ತಡೆಯಲು ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಆ ಸ್ಥಳದಲ್ಲಿ ತಾರ್ಪಲಿನ್ ಶೀಟ್ ಗಳನ್ನು ಹಾಸಿತ್ತು. ಈ ನಡೆಯ ವಿರುದ್ಧ ನಡೆದಿದ್ದ ಪ್ರತಿಭಟನೆಯಲ್ಲಿ ಟಾರ್ಪಲಿನ್ ಶೀಟ್ ಗಳನ್ನು ಬಲವಂತವಾಗಿ ತೆರವುಗೊಳಿಸುವ ಮೂಲಕ, ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು.