ಪ್ರಧಾನಿ ಮೋದಿಗೆ ಬ್ರೆಝಿಲ್‌ನ ಅತ್ಯುನ್ನತ ನಾಗರಿಕ ಗೌರವ ಪ್ರದಾನ
Photo credit: X/@narendramodi
ಬ್ರೆಸಿಲಿಯಾ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬ್ರೆಝಿಲ್‌ನ ಅತ್ಯುನ್ನತ ನಾಗರಿಕ ಗೌರವವಾದ "ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್' ಅನ್ನು ಪ್ರದಾನ ಮಾಡಲಾಯಿತು.
ಬ್ರೆಸಿಲಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರೆಝಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ನಾಗರಿಕ ಗೌರವ ಪ್ರದಾನ ಮಾಡಿ, ಸನ್ಮಾನಿಸಿದರು.
ದ್ವಿಪಕ್ಷೀಯ ಬಾಂಧವ್ಯಗಳ ಬಲವರ್ಧನೆ ಹಾಗೂ ಜಾಗತಿಕ ವೇದಿಕೆಗಳಲ್ಲಿ ಭಾರತ-ಬ್ರೆಝಿಲ್ ಸಹಕಾರ ವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕೊಡುಗೆಗಳನ್ನು ಗುರುತಿಸಿ, ಅವರನ್ನು ಗೌರವಿಸಲಾಯಿತು.
"ಬ್ರೆಝಿಲ್‌ನ ಅಧ್ಯಕ್ಷರು ತಮ್ಮ ದೇಶದ ಅತ್ಯುನ್ನತ ನಾಗರಿಕ ಗೌರವವನ್ನು ನನಗೆ ಪ್ರದಾನ ಮಾಡಿ, ಸನ್ಮಾನಿಸಿರುವುದು ನನಗೆ ಮಾತ್ರವಲ್ಲ, ಎಲ್ಲ 140 ಕೋಟಿ ಭಾರತೀಯರಿಗೂ ಸಂದ ಗೌರವ ಮತ್ತು ಹೆಮ್ಮೆಯ ಕ್ಷಣವಾಗಿದೆ" ಎಂದು ಸನ್ಮಾನ ಸ್ವೀಕರಿಸಿದ ನಂತರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
"ಈ ವೇಳೆ ಬ್ರೆಝಿಲ್‌ನ ಅಧ್ಯಕ್ಷರು, ಬ್ರೆಝಿಲ್ ಸರಕಾರ ಹಾಗೂ ಅಲ್ಲಿನ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇದರಿಂದ ಉಭಯ ದೇಶಗಳ ಬಾಂಧವ್ಯವನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಹಾಗೂ ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿದೆ" ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
"ಈ ಪ್ರಶಸ್ತಿಯು ಭಾರತ ಮತ್ತು ಬ್ರೆಝಿಲ್ ಜನತೆಯ ನಡುವಿನ ಸ್ನೇಹ ಬಾಂಧವ್ಯದ ಪ್ರತೀಕವಾಗಿದೆ" ಎಂದೂ ಅವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
2014ರಲ್ಲಿ ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ, ಅವರಿಗೆ ದೊರೆತಿರುವ ವಿವಿಧ ಅಂತಾರಾಷ್ಟ್ರೀಯ ಗೌರವ ಪುರಸ್ಕಾರಗಳ ಪೈಕಿ ಇದು 26ನೆಯದ್ದಾಗಿದೆ.
I’m honoured to have been conferred ‘The Grand Collar of the National Order of the Southern Cross.’ Gratitude to President Lula, the Government and the people of Brazil. This illustrates the strong affection the people of Brazil have for the people of India. May our friendship… pic.twitter.com/MpKS9FgsES
— Narendra Modi (@narendramodi) July 8, 2025