ಆಗಸ್ಟ್ 23 ಇನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ: ಪ್ರಧಾನಿ ಮೋದಿ ಘೋಷಣೆ
ಪ್ರಧಾನಿ ನರೇಂದ್ರ ಮೋದಿ (PTI)
ಹೊಸದಿಲ್ಲಿ: ಚಂದ್ರಯಾನ-3 ಮಿಷನ್ ಭಾಗವಾಗಿ ವಿಕ್ರಂ ಲ್ಯಾಂಡರ್ ಚಂದಿರನ ಮೇಲೆ ಹೆಜ್ಜೆಯಿರಿಸಿದ ಐತಿಹಾಸಿಕ ದಿನವಾದ ಆಗಸ್ಟ್ 23ರಂದು ಪ್ರತಿ ವರ್ಷ ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಘೋಷಿಸಿದ್ದಾರೆ. ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಕಾಲಿರಿಸಿದ ಸ್ಥಳವನ್ನು ಶಿವಶಕ್ತಿ ಪಾಯಿಂಟ್ ಎಂದು ಕರೆಯಲಾಗುವುದು ಹಾಗೂ ಚಂದ್ರಯಾನ-2 ಇದರ ಲೂನಾರ್ ಲ್ಯಾಂಡಿಂಗ್ ಪಾಯಿಂಟ್ ಅನ್ನು ತಿರಂಗ ಪಾಯಿಂಟ್ ಎಂದು ಕರೆಯಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.
“ಭಾರತ ಪಟ್ಟ ಪ್ರತಿಯೊಂದು ಶ್ರಮಕ್ಕೆ ಇದು ಪ್ರೇರಕ ಶಕ್ತಿಯಾಗಲಿದೆ, ಯಾವುದೇ ವೈಫಲ್ಯ ಅಂತಿಮವಲ್ಲ ಎಂಬುದನ್ನು ಅದು ನೆನಪಿಸಲಿದೆ,” ಎಂದು ಮೋದಿ ಹೇಳಿದರು.
ಇಂದು ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಇಸ್ರೋ ಕಮಾಂಡ್ ಸೆಂಟರ್‌ನಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡುವಾಗ ಭಾವುಕರಾದರು.
“ಆಗಸ್ಟ್ 23ರಂದು ಭಾರತವು ಚಂದ್ರನಲ್ಲಿ ತನ್ನ ಧ್ವಜ ಹಾರಿಸಿದೆ. ಆ ದಿನವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಆಚರಿಸಲಾಗುವುದು,” ಎಂದು ಹೇಳಿದ ಪ್ರಧಾನಿ ವಿಜ್ಞಾನಿಗಳನ್ನುದ್ದೇಶಿಸಿ ಮಾತನಾಡುತ್ತಾ,”ಇಂದು ನಿಮ್ಮ ಜೊತೆಗಿರುವಾಗ ನನಗೆ ಹೊಸ ರೀತಿಯ ಸಂತೋಷದ ಅನುಭವವಾಗುತ್ತಿದೆ,” ಎಂದು ಹೇಳಿದರು.