ಪ್ರಧಾನಿ ಮೋದಿ ಬಹಳ ಹಿಂದೆಯೇ ಮಣಿಪುರ ಭೇಟಿ ಕುರಿತು ಯೋಚಿಸಬಹುದಿತ್ತು: ಸಂಸದೆ ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ (Photo: PTI)
ವಯನಾಡ್ (ಕೇರಳ): ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಎರಡು ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ಭೇಟಿ ನೀಡುತ್ತಿರುವ ಕುರಿತು ಹರ್ಷ ವ್ಯಕ್ತಪಡಿಸಿರುವ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಅವರು ಬಹಳ ಹಿಂದೆಯೇ ಮಣಿಪುರ ಭೇಟಿಯ ಕುರಿತು ಯೋಚಿಸಬಹುದಿತ್ತು ಎಂದು ಅಭಿಪ್ರಾಯ ಪಟ್ಟರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, “ಮಣಿಪುರಕ್ಕೆ ಭೇಟಿ ನೀಡುವುದು ಮೌಲ್ಯಯುತ ಎಂದು ಪ್ರಧಾನಿ ಮೋದಿ ನಿರ್ಧರಿಸಿರುವ ಬಗ್ಗೆ ನನಗೆ ಸಂತೋಷವಾಗಿದೆ. ಅವರು ಬಹಳ ಹಿಂದೆಯೇ ಮಣಿಪುರಕ್ಕೆ ಭೇಟಿ ನೀಡಬಹುದಿತ್ತು. ಆದರೆ, ಇಷ್ಟು ದೀರ್ಘಕಾಲ ಅಲ್ಲಿ ಏನು ನಡೆಯುತ್ತಿದೆಯೊ, ಅದಕ್ಕೆ ಅವಕಾಶ ನೀಡಿ, ಹಲವಾರು ಮಂದಿಯ ಸಾವು, ಹಲವಾರು ಮಂದಿ ನಿರ್ವಸತಿಗರಾಗಲು ಅವಕಾಶ ನೀಡಿ, ಈಗ ಭೇಟಿ ನೀಡಲು ನಿರ್ಧರಿಸಿರುವುದು ದುರದೃಷ್ಟಕರ” ಎಂದು ವಿಷಾದ ವ್ಯಕ್ತಪಡಿಸಿದರು.
ಯಾವಾಗ ನೋವು ಮತ್ತು ಕಷ್ಟಗಳಿರುತ್ತವೊ, ಅಂತಹ ಸಂದರ್ಭಗಳಲ್ಲಿ ಭಾರತದ ಪ್ರಧಾನಿಗಳು ಅಂತಹ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಇದು ಸ್ವಾತಂತ್ರ್ಯ ಬಂದಾಗಿನಿಂದಲೂ ಇರುವ ಸಂಪ್ರದಾಯವಾಗಿದೆ. ಹೀಗಾಗಿ, ಅವರು ಈ ಸಂಪ್ರದಾಯವನ್ನು ಎರಡು ವರ್ಷಗಳ ನಂತರ ಪೂರೈಸುತ್ತಿದ್ದಾರೆ. ಅವರು ಇದನ್ನು ಮುಂಚಿತವಾಗಿಯೇ ಯೋಚಿಸಬೇಕಿತ್ತು ಎಂಬುದು ನನ್ನ ಭಾವನೆಯಾಗಿದೆ” ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು.