×
Ad

ಪಿಎಂ ಶ್ರೀ ಯೋಜನೆ ವಿವಾದ: ಕೇಂದ್ರ ತಡೆಹಿಡಿದಿರುವ 1,500 ಕೋಟಿ ರೂ.ಗಾಗಿ ಕಾನೂನು ಹೋರಾಟಕ್ಕೆ ಕೇರಳ ಸರಕಾರದ ನಿರ್ಧಾರ

Update: 2025-05-13 17:18 IST

PC : lokpahal.org

ತಿರುವನಂತಪುರ: ಪಿಎಂ ಶ್ರೀ ಯೋಜನೆಯನ್ನು ಕೇರಳವು ಒಪ್ಪಿಕೊಂಡಿಲ್ಲ ಎಂಬ ಕಾರಣದಿಂದ ಕೇಂದ್ರವು ವಿವಿಧ ಕೇಂದ್ರ ಪ್ರಾಯೋಜಿತ ಯೋಜನೆಗಳಡಿ ತಡೆಹಿಡಿದಿರುವ 1,500 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಪಡೆದುಕೊಳ್ಳಲು ತಾನು ಕಾನೂನು ಮತ್ತು ಪ್ರತಿಭಟನಾ ಮಾರ್ಗಗಳನ್ನು ಅನ್ವೇಷಿಸುವುದಾಗಿ ರಾಜ್ಯ ಸರಕಾರವು ಮಂಗಳವಾರ ತಿಳಿಸಿದೆ.

ತಮ್ಮ ಹಕ್ಕುಬದ್ಧ ಪಾಲಿಗಾಗಿ ಕೇಂದ್ರವನ್ನು ಒತ್ತಾಯಿಸಲು ಕೇರಳವು ತಮಿಳುನಾಡಿನೊಂದಿಗೆ ಕೈಜೋಡಿಸಲಿದೆ ಎಂದು ತಿಳಿಸಿದ ರಾಜ್ಯದ ಸಾರ್ವತ್ರಿಕ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಅವರು,ಕೇಂದ್ರವು ತಾರಾತಮ್ಯವನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಉಭಯ ರಾಜ್ಯಗಳ ನಡುವೆ ಸಂಘಟಿತ ಪ್ರಯತ್ನಕ್ಕೆ ಒತ್ತು ನೀಡಿದ ಶಿವನ್‌ಕುಟ್ಟಿ, ‘ನಾನು ಈಗಾಗಲೇ ಎರಡು ಸಲ ತಮಿಳುನಾಡು ಶಿಕ್ಷಣ ಸಚಿವರೊಂದಿಗೆ ಮಾತನಾಡಿದ್ದೇನೆ ಮತ್ತು ಮುಂದಿನ ವಾರ ಅವರನ್ನು ಭೇಟಿಯಾಗಲಿದ್ದೇನೆ’ ಎಂದು ಸುದ್ದಿಸಂಸ್ಥೆಗೆ ತಿಳಿಸಿದರು.

ದೇಶಾದ್ಯಂತ ಆಯ್ದ ಶಾಲೆಗಳನ್ನು ಮೇಲ್ದರ್ಜೆಗೇರಿಸುವ ಉದ್ದೇಶವನ್ನುಹೊಂದಿರುವ ಕೇಂದ್ರ ಸರಕಾರದ ಉಪಕ್ರಮವಾಗಿರುವ ಪಿಎಂ ಶ್ರೀ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಕೇರಳವು ನಿರಾಕರಿಸಿರುವುದರಿಂದ ಹಣವನ್ನು ತಡೆಹಿಡಿಯಲಾಗಿದೆ ಎನ್ನಲಾಗಿದೆ.

ತಮಿಳುನಾಡು ಸರಕಾರವು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯಗಳು ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯನ್ನು ಜಾರಿಗೆ ತರಬೇಕು ಎಂಬ ಯಾವುದೇ ಕಾನೂನು ನಿರ್ಬಂಧವಿಲ್ಲ ಎಂಬ ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪನ್ನು ಶಿವನ್‌ಕುಟ್ಟಿ ಉಲ್ಲೇಖಿಸಿದರು.

ಈ ತೀರ್ಪು ತನಗೆ ಬರಬೇಕಿರುವ ನ್ಯಾಯಯುತ ಹಣದ ಪಾಲನ್ನು ಪಡೆಯಲು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಲು ಕೇರಳ ಸರಕಾರಕ್ಕೆ ಅವಕಾಶವನ್ನು ಕಲ್ಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News