×
Ad

ಮಧ್ಯಪ್ರದೇಶ | ಗೋಹತ್ಯೆ ಪ್ರಕರಣದ ಆರೋಪಿಗಳನ್ನು ಮೆರವಣಿಗೆ ನಡೆಸಿ ಥಳಿಸಿದ ಪೊಲೀಸ್ ಅಧಿಕಾರಿಗಳಿಗೆ ಹಿಂದುತ್ವ ಸಂಘಟನೆಗಳಿಂದ ಸನ್ಮಾನ

Update: 2025-03-08 16:22 IST

Photo credit: twocircles.net

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಗೋಹತ್ಯೆ ಆರೋಪದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಇಬ್ಬರು ವ್ಯಕ್ತಿಗಳಿಗೆ ಪೊಲೀಸರು ಥಳಿಸಿ ಸಾರ್ವಜನಿಕವಾಗಿ ಮೆರವಣಿಗೆ ನಡೆಸಿರುವ ಘಟನೆ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಅದೇ ಪೊಲೀಸ್‌ ಅಧಿಕಾರಿಗಳಿಗೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಸದಸ್ಯರು ಸನ್ಮಾನವನ್ನು ಮಾಡಿದ್ದಾರೆ.

ಗೋಹತ್ಯೆ ಆರೋಪದಲ್ಲಿ ಸಲೀಂ ಮೇವಾಟಿ(37) ಮತ್ತು ಆಕಿಬ್ ಮೇವಾಟಿ(23) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ ಉಜ್ಜಯಿನಿ ಪೊಲೀಸರು ಸಾರ್ವಜನಿಕ ಬೀದಿಯಲ್ಲಿ ಮೆರವಣಿಗೆ ನಡೆಸಿ ಲಾಠಿಯಲ್ಲಿ ಥಳಿಸಿದ್ದಾರೆ. ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ. ಮೆರವಣಿಗೆ ವೇಳೆ ಓರ್ವ ʼಗೋವು ನಮ್ಮ ತಾಯಿʼ ಎಂದು ಘೋಷಣೆ ಕೂಗುವುದು ಕಂಡು ಬಂದಿದೆ.

ಘಟನೆಯ ಬಳಿಕ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸೇರಿದಂತೆ ಹಿಂದುತ್ವ ಗುಂಪುಗಳ ಸದಸ್ಯರು ಪೊಲೀಸ್ ಅಧಿಕಾರಿಗಳಿಗೆ ಅಭಿನಂದಿಸಿದರು. ವಿಎಚ್‌ಪಿಯ ಮಾಲ್ವಾ ವಲಯದ ಮುಖ್ಯಸ್ಥ ವಿನೋದ್ ಶರ್ಮಾ ವಿಎಚ್‌ಪಿ ಮತ್ತು ಬಜರಂಗದಳದ ಸದಸ್ಯರು ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಿರುವುದನ್ನು ಸಮರ್ಥಿಸಿಕೊಂಡರು.

ಉಜ್ಜಯಿನಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗುರುಪ್ರಸಾದ್ ಪರಾಸರ್ ಈ ಕುರಿತು ಪ್ರತಿಕ್ರಿಯಿಸಿ, ಪೊಲೀಸರು ಅವರನ್ನು ಥಳಿಸಲಿಲ್ಲ. ಯಾರೋ ಒಂದೆರಡು ಬಾರಿ ಹೊಡೆದಿರಬಹುದು, ಮಾಧ್ಯಮಗಳು ಅವುಗಳನ್ನೇ ಪ್ರಮುಖವಾಗಿಟ್ಟು ವರದಿ ಮಾಡಿದೆ ಎಂದು ಹೇಳಿದರು.

ಅಧಿಕಾರಿಗಳ ಪ್ರಕಾರ, ಸಲೀಂ ಮೇವಾಟಿ ಮತ್ತು ಆಕಿಬ್ ಮೇವಾಟಿ ಅವರನ್ನು ಫೆಬ್ರವರಿ 16 ರಂದು ಜೈತಾಲ್ ಗ್ರಾಮದ ಬಳಿ ಬಂಧಿಸಲಾಗಿದೆ. ಮೂರನೇ ಆರೋಪಿ ತಲೆಮರೆಸಿಕೊಂಡಿದ್ದಾನೆ. ಗೋಹತ್ಯೆ ನಿಷೇಧ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ವೇಳೆ ಕ್ರೀಡಾ ವಾಹನ, ಹಸು, ಕರು ಮತ್ತು ಆಯುಧಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಜರಂಗದಳದ ಸದಸ್ಯರು ಪೊಲೀಸರಿಗೆ ನೀಡಿದ ಮಾಹಿತಿಯನ್ವಯ ದಾಳಿ ಮಾಡಿ ಅವರನ್ನು ಬಂಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News