ದೇಗುಲ ವಿವಾದಕ್ಕೆ ರಾಜಕೀಯ ಲೇಪ: ಬಂಗಾಳ ವಿರುದ್ಧ ಕ್ರಮಕ್ಕೆ ಮುಂದಾದ ಒಡಿಶಾ
PC: x.com/frontline_india
ಭುವನೇಶ್ವರ/ ಕೊಲ್ಕತ್ತಾ: ಪಶ್ಚಿಮ ಬಂಗಾಳದ ದಿಘಾ ಎಂಬಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಜಗನ್ನಾಥ ದೇವಾಲಯಕ್ಕೆ "ಜಗನ್ನಾಥ ಧಾಮ" ಎಂಬ ನಾಮಕರಣ ಮಾಡಿರುವ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಒಡಿಶಾ ಸರ್ಕಾರ ಎಚ್ಚರಿಕೆ ನೀಡಿದೆ. ಇದು ಧಾರ್ಮಿಕ ಸಂಪ್ರದಾಯ, ಪ್ರಾದೇಶಿಕ ಹೆಮ್ಮೆ ಮತ್ತು ರಾಜಕೀಯ ಪೈಪೋಟಿಯ ಕಾರಣದಿಂದ ಹದಗೆಟ್ಟಿರುವ ಉಭಯ ರಾಜ್ಯಗಳ ನಡುವಿನ ಸಂಘರ್ಷದ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಧಾಮ ಎನ್ನುವುದನ್ನು ಕೇವಲ ನಾಲ್ಕು ಪವಿತ್ರ ತೀರ್ಥಕ್ಷೇತ್ರಗಳಾದ ಬದರೀನಾಥ್, ದ್ವಾರಕ, ರಾಮೇಶ್ವರಂ ಮತ್ತು ಜಗನ್ನಾಥ ಪುರಿಗೆ ಮಾತ್ರ ಬಳಸಬಹುದಾಗಿದೆ. ದಿಘಾ ದೇವಸ್ಥಾನಕ್ಕೆ ಧಾಮ ಎಂದು ಹೆಸರಿಸಿರುವುದು ಇತರೆಡೆಯ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಒಡಿಶಾ ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ಹೇಳಿದ್ದಾರೆ.
ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದು, ಒಡಿಶಾದ ಬಿಜೆಪಿ ನೇತೃತ್ವದ ಸರ್ಕಾರ "ಮಾತ್ಸರ್ಯದಿಂದ ಈ ಕ್ರಮ ಕೈಗೊಂಡಿದ್ದು, ಬಂಗಾಳಿಗಳನ್ನು ಗುರಿ ಮಾಡುತ್ತಿದೆ" ಎಂದು ಆಪಾದಿಸಿದ್ದಾರೆ. ಇದರಿಂದಾಗಿ ಜಾಲತಾಣಗಳಲ್ಲಿ #ಬಾಯ್ಕಾಟ್ ಪುರಿ, #ಬಾಯ್ಕಾಟ್ಒಡಿಶಾ ಎಂಬ ಹ್ಯಾಷ್ ಟ್ಯಾಗ್ ಗಳಡಿ ಸಂದೇಶಗಳು ಹರಿದಾಡುತ್ತಿವೆ.
ಅಂತೆಯೇ ದಿಘಾ ದೇವಾಲಯ ಬಳಿಯ ಕಡಲ ಕಿನಾರೆಗೆ ಮಹೋದಧಿ ಎಂದು ಕರೆಯುವುದನ್ನು ನಿಲ್ಲಿಸುವಂತೆಯೂ ಬಂಗಾಳಕ್ಕೆ ಆಗ್ರಹಿಸಲಿದ್ದೇವೆ; ಏಕೆಂದರೆ ಪುರಾಣಗಳಲ್ಲಿ ಪುರಿಯ ಬೀಚ್ ಗೆ ಈ ಹೆಸರಿದೆ ಎಂದು ಅವರು ವಿವರಿಸಿದ್ದಾರೆ.
ಪುರಿಯ ಹಕ್ಕುದಾರಿ ರಾಜ ಹಾಗೂ ಜಗನ್ನಾಥ ದೇವಾಲಯದ ಮುಖ್ಯ ಧರ್ಮದರ್ಶಿ ಗಣಪತಿ ದಿಬ್ಯಸಿಂಘ ದೇಬ್ ಕೂಡಾ ಏಪ್ರಿಲ್ 30ರಂದು ಉದ್ಘಾಟನೆಗೊಂಡ ದಿಘಾ ದೇಗುಲಕ್ಕೆ ಜಗನ್ನಾಥ ಧಾಮ ಎಂಬ ಹೆಸರು ಬಳಕೆ ಮಾಡಿರುವ ಕ್ರಮವನ್ನು ಖಂಡಿಸಿದ್ದಾರೆ. ಇದನ್ನು ಕೇವಲ ಪುರಿಗೆ ಮಾತ್ರ ಬಳಸಬಹುದಾಗಿದೆ ಎಂದು ಹೇಳಿದರು. ಪ್ರಾಚೀನ ಶಾಸ್ತ್ರಗಳಲ್ಲಿ ಮತ್ತು ಪಂಡಿತ ಸಭಾದ ಮುಕ್ತಿ ಮಂಟಪಗಳಲ್ಲಿ ಈ ಉಲ್ಲೇಖ ಇದೆ. ಆದ್ದರಿಂದ ಜಗನ್ನಾಥ ಧಾಮ ಎಂದು ದಿಘಾ ದೇವಸ್ಥಾನವನ್ನು ಕರೆಯುವುದನ್ನು ತಕ್ಷಣ ನಿಲ್ಲಿಸುವಂತೆ ಅವರು ಆಗ್ರಹಿಸಿದ್ದಾರೆ.