2019ರ ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ: 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
Photo | PTI
ಚೆನ್ನೈ: 2019ರಲ್ಲಿ ತಮಿಳುನಾಡಿನ ಪೊಲ್ಲಾಚಿಯಲ್ಲಿ 9 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬ್ಲಾಕ್‌ಮೇಲ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ 9 ಅಪರಾಧಿಗಳನ್ನು ಕೊಯಮತ್ತೂರಿನ ಸೆಷನ್ಸ್ ನ್ಯಾಯಾಲಯ ತಪ್ಪಿತಸ್ಥರೆಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಅಪರಾಧಿಗಳಾದ ಕೆ.ತಿರುನಾವುಕ್ಕರಸು (34), ಎನ್. ರಿಶ್ವಂತ್(32), ಎಂ.ಸತೀಶ್ (33), ಟಿ. ವಸಂತ ಕುಮಾರ್ (30), ಆರ್.ಮಣಿವಣ್ಣನ್ (32), ಹರೋನ್ ಪಾಲ್ (32), ಪಿ. ಬಾಬು (33), ಕೆ. ಅರುಳಾನಂದಂ (39) ಮತ್ತು ಎಂ. ಅರುಣ್ ಕುಮಾರ್‌ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ಇದಲ್ಲದೆ ಸಂತ್ರಸ್ತ ಮಹಿಳೆಯರಿಗೆ ಒಟ್ಟಾರೆ 85 ಲಕ್ಷ ರೂ. ಪರಿಹಾರ ನೀಡುವಂತೆ ಸೂಚಿಸಿದೆ.
ಈ ಪ್ರಕರಣ ತಮಿಳುನಾಡಿನಲ್ಲಿ ಭಾರೀ ಸುದ್ದಿಯಾಗಿತ್ತು. ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಪ್ರಾಸಿಕ್ಯೂಷನ್ ಕೋರಿತ್ತು. 2019ರಲ್ಲಿ ಪೊಲ್ಲಾಚಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಸೇರಿದಂತೆ ಕನಿಷ್ಠ 9 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹಣಕ್ಕಾಗಿ ಬ್ಲಾಕ್ಮೇಲ್ ಮಾಡಿರುವ ಆರೋಪ ಕೇಳಿ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಶಬರಿರಾಜನ್ ಅಲಿಯಾಸ್ ರಿಶ್ವಂತ್, ತಿರುನಾವುಕರಸು, ಟಿ ವಸಂತ ಕುಮಾರ್, ಎಂ ಸತೀಶ್, ಮಣಿವಣ್ಣನ್, ಪಿ ಬಾಬು, ಹರೋನ್ ಪಾಲ್, ಅರುಳನಂತಮ್ ಮತ್ತು ಅರುಣ್ ಕುಮಾರ್ ಎಂಬ ಆರೋಪಿಗಳನ್ನು 2019ರಲ್ಲಿ ಬಂಧಿಸಲಾಗಿತ್ತು.
ಆರೋಪಿಗಳ ವಿರುದ್ಧ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಕ್ರಿಮಿನಲ್ ಪಿತೂರಿ, ಲೈಂಗಿಕ ಕಿರುಕುಳ ಮತ್ತು ಬ್ಲಾಕ್‌ಮೇಲ್ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಕೃತ್ಯ 2016 ಮತ್ತು 2018ರ ನಡುವೆ ನಡೆದಿದೆ. ಲೈಂಗಿಕ ದೌರ್ಜನ್ಯದ ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆಯಿಡಿದು ಸಂತ್ರಸ್ತರ ಮೇಲೆ ನಿರಂತರ ಶೋಷಣೆ ಮಾಡಲಾಗಿತ್ತು. ಪೊಲ್ಲಾಚಿ ಪೊಲೀಸರು ತನಿಖೆ ನಡೆಸುತ್ತಿದ್ದ ಈ ಪ್ರಕರಣವನ್ನು ಆ ಬಳಿಕ CBI ತನಿಖೆಗೆ ವರ್ಗಾಯಿಸಲಾಗಿತ್ತು.