ಒಬ್ಬ ಮತದಾರನ ಮತಚಲಾವಣೆಗೆ ಅಧಿಕಾರಿಗಳು ಸವೆಸಬೇಕು 40 ಕಿ.ಮೀ. ಕಾಲ್ದಾರಿ!

Update: 2024-03-28 12:11 GMT

Photo : eenadu.net

ಇಟಾನಗರ: ಅರುಣಾಚಲ ಪ್ರದೇಶದ ಚೀನಾ ಗಡಿಯ ಬಳಿ ಇರುವ ಮಾಲೋಗಮ್ ಗ್ರಾಮದಲ್ಲಿರುವ ಮಹಿಳೆಯೊಬ್ಬರ ಮತದಾನಕ್ಕಾಗಿ ಚುನಾವಣಾ ಅಧಿಕಾರಿಗಳ ತಂಡವು ಏಪ್ರಿಲ್ 18ರಂದು ಕಾಲ್ನಡಿಗೆಯಲ್ಲೇ 40 ಕಿ.ಮೀ. ಬೆಟ್ಟಗುಡ್ಡಗಳ ದುರ್ಗಮ ಹಾದಿಯನ್ನು ಸವೆಸಬೇಕಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

44 ವರ್ಷದ ಸೊಕೇಲಾ ತಯಾಂಗ್ ಅವರೇ ಈ ಗ್ರಾಮದ ಏಕೈಕ ಮತದಾರರು ಎಂದು ತಿಳಿದು ಬಂದಿದೆ.

‘ಒಂದು ಮತಗಟ್ಟಯಲ್ಲಿ ಎಷ್ಟು ಮತದಾರರಿದ್ದಾರೆ ಎನ್ನುವುದು ಮುಖ್ಯವಲ್ಲ. ಪ್ರತಿಯೊಬ್ಬ ಪ್ರಜೆಯೂ ತಮ್ಮ ಹಕ್ಕು ಚಲಾಯಿಸುವುದು ಮುಖ್ಯ. ಸೊಕೇಲಾ ಅವರ ಮತವು ನಮ್ಮ ಬದ್ಧತೆಗೆ ಸಾಕ್ಷಿ’ ಎಂದು ಮುಖ್ಯ ಚುನಾವಣಾ ಅಧಿಕಾರಿ ಪವನ್ ಕುಮಾರ್ ಸೈನ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಗಡಿಯಂಚಿನ್ಲಲಿರುವ ಮಾಲೋಗಮ್ ಗ್ರಾಮದಲ್ಲಿ ಕೆಲವೇ ಕುಟುಂಬಗಳು ನೆಲೆಸಿವೆ. ಸೊಕೇಲಾ ಅವರೊಬ್ಬರೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಹಾಗಾಗಿ ಅಲ್ಲಿ ಅವರೊಬ್ಬರಿಗಾಗಿಯೇ ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.

‘ ತನ್ನ ಧ್ವನಿಯನ್ನೂ ಆಲಿಸಲಾಗುತ್ತಿದೆ ಎಂದು ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಬಳಿಕ ಅರಿವಾಗಬೇಕು. ಸೊಕೆಲ ತಯಾಂಗ್ ಅವರ ಮತವು, ಎಲ್ಲರನ್ನು ಒಳಗೊಳ್ಳುವ ಮತ್ತು ಸಮಾನತೆ ಬಗ್ಗೆ ಇರುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ’ ಎಂದು ಮುಖ್ಯ ಚುನಾವಣಾಧಿಕಾರಿ ಹೇಳಿದರು.

ಚುನಾವಣಾ ಆಯೋಗದ ಪ್ರಕಾರ, ಮಲೋಗಾಮ್ನಲ್ಲಿ ಕೆಲವು ಕುಟುಂಬಗಳು ವಾಸಿಸುತ್ತಿದ್ದಾರೆ. ತಯಾಂಗ್ ಅವರು ಹೊರತುಪಡಿಸಿ ಉಳಿದವರೆಲ್ಲರೂ ಸಮೀಪದ ಮತಗಟ್ಟೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News