×
Ad

ಬಿಹಾರ ಚುನಾವಣೆಯಲ್ಲಿ ಅಕ್ರಮ ನಡೆದಿದೆ, ಆದರೆ ಯಾವುದೇ ಪುರಾವೆ ಇಲ್ಲ : ಪ್ರಶಾಂತ್ ಕಿಶೋರ್

Update: 2025-11-23 12:32 IST

ಪ್ರಶಾಂತ್ ಕಿಶೋರ್ (Photo: PTI)

ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜನ್ ಸುರಾಜ್ ಪಕ್ಷಕ್ಕೆ ಹಿನ್ನಡೆ ಬಳಿಕ ಮೌನ ಮುರಿದ ಪಕ್ಷದ ಸ್ಥಾಪಕ, ಮಾಜಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್, ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಆದರೆ ಈ ಹಂತದಲ್ಲಿ ಆರೋಪಕ್ಕೆ ಸಂಬಂಧಿಸಿ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದರು.

ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷ ಬಿಹಾರ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿತ್ತು. ಜನ್ ಸುರಾಜ್ ಪಕ್ಷಕ್ಕೆ ಚುನಾವಣಾ ಪ್ರಚಾರದ ಸಮಯದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಜನರಿಂದ ಪಡೆದ ಪ್ರತಿಕ್ರಿಯೆಗೆ ಫಲಿತಾಂಶಗಳು ಹೊಂದಿಕೆಯಾಗುವುದಿಲ್ಲ. ಏನೋ ತಪ್ಪಾಗಿದೆ ಎಂದು ನಾವು ನಂಬುತ್ತೇವೆ ಎಂದು ಪ್ರಶಾಂತ್ ಕಿಶೋರ್ ಹೇಳಿದರು.

ಬಿಹಾರ ಚುನಾವಣೆಯಲ್ಲಿ ಕೆಲವು ಕಾಣದ ಶಕ್ತಿಗಳು ಕೆಲಸ ಮಾಡಿದಂತೆ ಕಂಡು ಬರುತ್ತಿದೆ. ಇವಿಎಂನಲ್ಲಿ ಅವ್ಯವಾಹಾರ ನಡೆದಿದೆ ಎಂದು ಧ್ವನಿ ಎತ್ತುವಂತೆ ಕೆಲವರು ನನ್ನನ್ನು ಆಗ್ರಹಿಸುತ್ತಿದ್ದಾರೆ. ಇದು ಸೋತ ನಂತರ ಜನರು ಸಾಮಾನ್ಯವಾಗಿ ಮಾಡುವ ಆರೋಪವಾಗಿದೆ. ನನ್ನ ಬಳಿ ಯಾವುದೇ ಪುರಾವೆಗಳಿಲ್ಲ. ಆದರೆ ಅನೇಕ ವಿಷಯಗಳು ಸರಿಯಾಗಿ ಹೊಂದಿಕೆಯಾಗುತ್ತಿಲ್ಲ. ಮೇಲ್ನೋಟಕ್ಕೆ ಏನೋ ತಪ್ಪಾಗಿದೆ ಎಂದು ತೋರುತ್ತದೆ. ಆದರೆ ಏನು ತಪ್ಪಾಗಿದೆ ಎಂಬುದು ನನಗೆ ಗೊತ್ತಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಬಿಹಾರದಲ್ಲಿ ಸಾವಿರಾರು ಮಹಿಳಾ ಮತದಾರರಿಗೆ ಎನ್‌ಡಿಎ ಮೈತ್ರಿಕೂಟ ಹಣವನ್ನು ವಿತರಿಸಿದೆ ಎಂದು ಪ್ರಶಾಂತ್ ಕಿಶೋರ್ ಆರೋಪಿಸಿದರು. ಚುನಾವಣೆ ಘೋಷಣೆ ದಿನದಿಂದ ಮತದಾನದವರೆಗೆ ಮಹಿಳೆಯರಿಗೆ 10,000ರೂ.ನೀಡಲಾಗಿದೆ. ಅವರಿಗೆ ಒಟ್ಟು 2 ಲಕ್ಷ ರೂ ನೀಡುವುದಾಗಿ ಹೇಳಲಾಗಿದೆ. 10,000ರೂ. ಮೊದಲ ಕಂತು ಎಂದು ಹೇಳಿದ್ದಾರೆ. ಎನ್‌ಡಿಎಗೆ, ನಿತೀಶ್ ಕುಮಾರ್‌ಗೆ ಮತ ಹಾಕಿದರೆ ಉಳಿದ ಹಣ ಸಿಗುತ್ತದೆ ಎಂದು ಮಹಿಳೆಯರಿಗೆ ಹೇಳಲಾಗಿತ್ತು. ಈ ಮೊದಲು ಬಿಹಾರದಲ್ಲಾಗಲಿ, ಭಾರತದಲ್ಲಾಗಲಿ ಮಹಿಳೆಯರಿಗೆ ಸರಕಾರ ಈ ರೀತಿ ನೇರವಾಗಿ ಹಣವನ್ನು ವಿತರಿಸಿರುವುದು ನನಗೆ ತಿಳಿದಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದರು.

ಜನ್ ಸುರಾಜ್ ವಿರುದ್ಧ ಹೆಚ್ಚು ಪರಿಣಾಮ ಬೀರಿದ ಮತ್ತೊಂದು ಅಂಶವೆಂದರೆ ಲಾಲು ಅವರ “ಜಂಗಲ್ ರಾಜ್” ಮರಳುವ ಭಯ. ಪ್ರಚಾರದ ಕೊನೆಯ ವೇಳೆ ಅನೇಕ ಜನರು ಜನ್ ಸುರಾಜ್ ಗೆಲ್ಲುವ ಸ್ಥಿತಿಯಲ್ಲಿಲ್ಲ ಎಂದು ಭಾವಿಸಿದ್ದರು. ಅವರಿಗೆ ಲಾಲು ಅವರ ಜಂಗಲ್ ರಾಜ್ ಮರಳುವ ಭಯವಿತ್ತು. ಇದು ಜನರನ್ನು ಪಕ್ಷಕ್ಕೆ ಮತ ಹಾಕದಂತೆ ದೂರ ಮಾಡಿತು ಎಂದು ಪ್ರಶಾಂತ್ ಕಿಶೋರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News