ಪುಣೆಯ ಪಿಂಪ್ರಿ ಆಸ್ಪತ್ರೆಯಿಂದ 2022ರಲ್ಲಿ ಲೋಕೊಮೋಟರ್ ಅಂಗವೈಕಲ್ಯ ಪ್ರಮಾಣ ಪತ್ರ ಪಡೆದಿದ್ದ ಪೂಜಾ ಖೇಡ್ಕರ್ : ವರದಿ
ಪೂಜಾ ಖೇಡ್ಕರ್ | Credit: X/@oldschoolmonk
ಪುಣೆ: ಪ್ರೊಬೆಷನರಿ ಐಎಎಸ್ ಅಧಿಕಾರಿಯಾದ ಪೂಜಾ ಖೇಡ್ಕರ್ 2022ರ ಆಗಸ್ಟ್ ತಿಂಗಳಲ್ಲಿ ಪುಣೆಯ ಪಿಂಪ್ರಿ ಆಸ್ಪತ್ರೆಯೊಂದರಿಂದ ಭಾಗಶಃ ಲೋಕೊಮೋಟರ್ ಅಂಗವೈಕಲ್ಯ ಪ್ರಮಾಣ ಪತ್ರವನ್ನು ಪಡೆದಿದ್ದರು ಎಂದು ಮಂಗಳವಾರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು deccanherald.com ವರದಿ ಮಾಡಿದೆ.
ನಾಗರಿಕ ಸೇವೆಗಳಿಗೆ ಪ್ರವೇಶ ಪಡೆಯಲು ನಕಲಿ ಅಂಗವೈಕಲ್ಯ ಪ್ರಮಾಣ ಪತ್ರಗಳನ್ನು ಸಲ್ಲಿಸಿರುವ ಆರೋಪ ಎದುರಿಸುತ್ತಿರುವ ಪೂಜಾ ಖೇಡ್ಕರ್‌ರನ್ನು ಪುಣೆಯಿಂದ ವಾಶೀಂಗೆ ವರ್ಗಾಯಿಸಲಾಗಿದೆ ಎಂದು ಹೇಳಲಾಗಿದ್ದು, ತನ್ನ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗಕ್ಕೆ ಪೂಜಾ ಖೇಡ್ಕರ್ ಸಲ್ಲಿಸಿರುವ ಪ್ರಮಾಣ ಪತ್ರಗಳ ನೈಜತೆಯನ್ನು ಪರಿಶೀಲಿಸುವಂತೆ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಇಲಾಖೆಯ ಆಯುಕ್ತರು ನೀಡಿರುವ ಸೂಚನೆಯಂತೆ ದೃಷ್ಟಿ ದೋಷಕ್ಕೆ ಸಂಬಂಧಿಸಿದ ಆರೋಪದ ಕುರಿತು ತನಿಖೆ ನಡೆಸಲಾಗುವುದು ಎಂದು ಇಂದು ಬೆಳಗ್ಗೆ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಿಂಪ್ರಿಯಲ್ಲಿನ ಸರಕಾರಿ ಯಶವಂತರಾವ್ ಚವಾಣ್ ಸ್ಮರಣಾರ್ಥ ಆಸ್ಪತ್ರೆಯ ವೈದ್ಯರಾದ ಡಾ. ರಾಜೇಂದ್ರ ವಾಬ್ಲೆ, "2022ರಲ್ಕಿ ಆಕೆ ತನ್ನ ಎಡ ಮೊಣಕಾಲಿನ ಅಂಗವೈಕಲ್ಯದ ಕುರಿತು ಅಂಗವೈಕಲ್ಯ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆಕೆ ವೈದ್ಯಕೀಯ ಪರೀಕ್ಷೆಗಾಗಿ ಇಲ್ಲಿನ ಆಸ್ಪತ್ರೆಗೆ ಭೇಟಿ ನೀಡಿದ್ದರು ಹಾಗೂ ಅವರನ್ನು ಹಲವಾರು ವಿಭಾಗಗಳು ಮೌಲ್ಯಮಾಪನ ಮಾಡಿದ್ದವು" ಎಂದು ಹೇಳಿದ್ದಾರೆ.
"ಆಕೆಗೆ ಶೇ. 7ರಷ್ಟು ಲೋಕೊಮೋಟರ್ ಅಂಗವೈಕಲ್ಯ ಸಮಸ್ಯೆ ಇರುವುದು ಈ ಪರೀಕ್ಷೆಗಳ ಸಂದರ್ಭದಲ್ಲಿ ಕಂಡು ಬಂದಿತ್ತು" ಎಂದೂ ಅವರು ತಿಳಿಸಿದ್ದಾರೆ.
ಆಗಸ್ಟ್ 24, 2022ರಂದು ಆಕೆಗೆ ವಿತರಿಸಲಾಗಿರುವ ಅಂಗವೈಕಲ್ಯ ಪ್ರಮಾಣ ಪತ್ರದಲ್ಲಿ ಅವರ ಮೊಣಕಾಲಿನಲ್ಲಿ ಶೇ. 7ರಷ್ಟು ಅಂಗವೈಕಲ್ಯವಿದೆ ಎಂದು ಹೇಳಲಾಗಿದೆ.
ಇದಕ್ಕೂ ಮುನ್ನ, 2018 ಹಾಗೂ 2021ರಲ್ಲಿ ಅಹ್ಮದ್‌ನಗರ್ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಒದಗಿಸಿದ್ದ ಅಂಗವೈಕಲ್ಯ ಪ್ರಮಾಣ ಪತ್ರವನ್ನು ಗಣನೀಯ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಪ್ರವರ್ಗದಡಿ ಕೇಂದ್ರ ಲೋಕಸಭಾ ಆಯೋಗಕ್ಕೆ ಸಲ್ಲಿಸಿದ್ದರು ಹಾಗೂ 2022ರಲ್ಲಿ ಪುಣೆಯ ಔಂಧ್ ಸರಕಾರಿ ಆಸ್ಪತ್ರೆಯಿಂದ ಅಂಗವೈಕಲ್ಯ ಪ್ರಮಾಣ ಪತ್ರಗಳಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ವೈದ್ಯಕೀಯ ಪರೀಕ್ಷೆಗಳ ನಂತರ ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು.
ಈ ನಡುವೆ, ತನ್ನ ವಿರುದ್ಧ ಅಪಪ್ರಚಾರ ಹಾಗೂ ತಪ್ಪು ಮಾಹಿತಿಗಳನ್ನು ಹರಡದಂತೆ ಪೂಜಾ ಖೇಡ್ಕರ್ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.