ಪೂಂಛ್ ಶೆಲ್ ದಾಳಿ | ಜೊತೆಯಲ್ಲೇ ಜನಿಸಿದ್ದ ಅವಳಿ ಮಕ್ಕಳು ಜೊತೆಯಲ್ಲೇ ಮೃತ್ಯು ,ಅಕ್ಕಪಕ್ಕದಲ್ಲೇ ದಫನ
PC : freepik.com
ಪೂಂಛ್(ಜಮ್ಮುಕಾಶ್ಮೀರ): ಜೊತೆಯಾಗಿಯೇ ಜನಿಸಿದ್ದ ಪೂಂಛ್ ಜಿಲ್ಲೆಯ 12 ವರ್ಷ ವಯಸ್ಸಿನ ಅವಳಿ ಜವಳಿ ಮಕ್ಕಳಾದ ಉರ್ಬಾ ಫಾತಿಮಾ ಮತ್ತು ಝೈನ್ ಅಲಿ ಮೇ 7ರಂದು ಬೆಳಿಗ್ಗೆ ಜೊತೆಯಾಗಿಯೇ ಸಾವನ್ನಪ್ಪಿದ್ದಾರೆ. ನಾಲ್ವರ ಕುಟುಂಬವು ಪಾಕಿಸ್ತಾನದ ಶೆಲ್ ದಾಳಿಯಿಂದ ಪಾರಾಗಿ ಸುರಕ್ಷಿತ ಸ್ಥಳಕ್ಕೆ ಧಾವಿಸುವ ಪ್ರಯತ್ನದಲ್ಲಿದ್ದಾಗಲೇ ಶೆಲ್‌ವೊಂದು ಈ ಕಂದಮ್ಮಗಳಿಗೆ ಬಡಿದಿತ್ತು.
ತಮ್ಮ ಅಲ್ಪಾವಧಿಯ ಜೀವನದ ಪ್ರತಿಯೊಂದೂ ಕ್ಷಣವನ್ನು ಹಂಚಿಕೊಂಡಿದ್ದ ಅವಳಿಗಳು ಈಗ ಖಬರಸ್ತಾನದಲ್ಲಿ ಅಕ್ಕಪಕ್ಕದಲ್ಲಿ ದಫನಗೊಂಡು ಚಿರವಿಶ್ರಾಂತಿ ಪಡೆಯುತ್ತಿದ್ದಾರೆ.
ರಮೀಝ್ ಅಹ್ಮದ್ ಖಾನ್,ಪತ್ನಿ ಉರ್ಷಾ ಖಾನ್ ತಮ್ಮ ಮಕ್ಕಳಾದ ಉರ್ಬಾ ಮತ್ತು ಝೈನ್ ಜೊತೆ ಪೂಂಛ್ ಪಟ್ಟಣದ ಡೊಂಗಸ್ ಪ್ರದೇಶದಲ್ಲಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ರಾತ್ರಿ ಶೆಲ್ ದಾಳಿ ಆರಂಭಗೊಂಡಾಗ ಕುಟುಂಬ,ವಿಶೇಷವಾಗಿ ಮಕ್ಕಳು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಭಾರೀ ಸ್ಫೋಟಗಳ ಶಬ್ದಗಳನ್ನು ಕೇಳಿ ಭಯಭೀತರಾಗಿದ್ದರು. ಖಾನ್ ತನ್ನ ಸಂಬಂಧಿಗೆ ಕರೆ ಮಾಡಿ ತಮ್ಮನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವಂತೆ ಕೋರಿದ್ದರು. ಸಂಬಂಧಿ ಬೆಳಿಗ್ಗೆ 6:30ರ ಸುಮಾರಿಗೆ ಪ್ರದೇಶವನ್ನು ತಲುಪಿದಾಗ ಶೆಲ್ ದಾಳಿ ಇನ್ನೂ ನಡೆಯುತ್ತಲೇ ಇತ್ತು. ಖಾನ್‌ಗೆ ಕರೆ ಮಾಡಿದ್ದ ಅವರು ತಾನು ಮನೆಯ ಹೊರಗೆ ಕಾಯುತ್ತಿರುವುದಾಗಿ ತಿಳಿಸಿದ್ದರು. ಖಾನ್ ಕುಟುಂಬವು ಮುಖ್ಯ ಪ್ರವೇಶದ್ವಾರವನ್ನು ತೆರೆದು ರಸ್ತೆಯತ್ತ ಕೆಲವು ಹೆಜ್ಜೆಗಳನ್ನಿಟ್ಟಾಗಲೇ ಕನಿಷ್ಠ ಮೂರು ಶೆಲ್‌ಗಳು ಆ ಪ್ರದೇಶಕ್ಕೆ ಅಪ್ಪಳಿಸಿದ್ದವು. ತೀವ್ರವಾಗಿ ಗಾಯಗೊಂಡಿದ್ದ ಎಲ್ಲ ನಾಲ್ವರನ್ನು ಸಂಬಂಧಿ ಸ್ಥಳೀಯರ ನೆರವಿನೊಂದಿಗೆ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಕೆಲವೇ ನಿಮಿಷಗಳ ಅಂತರದಲ್ಲಿ ಅವಳಿ ಮಕ್ಕಳು ಕೊನೆಯುಸಿರೆಳೆದಿದ್ದರು.
ಖಾನ್ ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳನ್ನು ಪಟ್ಟಣದ ಮಂಡಿ ಪ್ರದೇಶದಲ್ಲಿಯ ಖಬರ್‌ಸ್ತಾನದಲ್ಲಿ ಅಕ್ಕಪಕ್ಕದಲ್ಲಿಯೇ ದಫನ ಮಾಡಲಾಗಿದೆ. ಮಕ್ಕಳು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದರು.