×
Ad

ಉತ್ತರ ಪ್ರದೇಶ | ಹೆದ್ದಾರಿಯಲ್ಲಿ ಮಗುಚಿ ಬಿದ್ದ ವಾಹನದಿಂದ ಕೋಳಿಗಳನ್ನು ಹೊತ್ತೊಯ್ಯಲು ಮುಗಿಬಿದ್ದ ಗ್ರಾಮಸ್ಥರು!

Update: 2025-02-17 17:02 IST

screengrab: X/@timesofindia

ಲಕ್ನೊ: ಅಮೇಥಿಯಿಂದ ಫಿರೋಝ್ ಪುರ್ ಗೆ ಕೋಳಿಗಳನ್ನು ಹೊತ್ತೊಯ್ಯುತ್ತಿದ್ದ ಕೋಳಿ ಸಾಗಾಣಿಕೆ ವಾಹನವೊಂದು ಶನಿವಾರ ಲಕ್ನೊ-ಆಗ್ರಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಮಗುಚಿ ಬಿದ್ದಿದ್ದು, ಕೋಳಿಗಳನ್ನು ಹೊತ್ತೊಯ್ಯಲು ಸುತ್ತಲಿನ ಗ್ರಾಮಸ್ಥರು ಮುಗಿ ಬಿದ್ದಿರುವ ಘಟನೆ ನಡೆದಿದೆ.

ಈ ದೃಶ್ಯವನ್ನು ದಾರಿಹೋಕರು ತಮ್ಮ ಮೊಬೈಲ್ ಫೋನ್ ಗಳಲ್ಲಿ ಸೆರೆ ಹಿಡಿದಿದ್ದು, ಕೂಡಲೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸುದ್ದಿ ತಿಳಿದು ಪೊಲೀಸರು ಹಾಗೂ ಉತ್ತರ ಪ್ರದೇಶ ಎಕ್ಸ್ ಪ್ರೆಸ್ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ ನಂತರವಷ್ಟೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಪೊಲೀಸರು ಹಾಗೂ ಉತ್ತರ ಪ್ರದೇಶ ಎಕ್ಸ್ ಪ್ರೆಸ್ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ನೋಡುತ್ತಿದ್ದಂತೆಯೆ ಗಾಬರಿಗೊಂಡ ಗ್ರಾಮಸ್ಥರು ಸ್ಥಳದಿಂದ ಪರಾರಿಯಾಗಿದ್ದಾರೆ.

ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಹಾಗೂ ಕ್ಲೀನರ್ ನನ್ನು ಕನೌಜ್ ಆಸ್ಪತ್ರೆ ದಾಖಲಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್, “ಚಾಲಕನಿಗೆ ತೂಕಡಿಕೆ ಬಂದು ಟ್ರಕ್ ಮೇಲೆ ನಿಯಂತ್ರಣ ಕಳೆದುಕೊಂಡಿದ್ದರಿಂದ, ಅದು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಕೋಳಿಗಳನ್ನು ಹೊತ್ತೊಯ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಕೆಲಸದಲ್ಲಿ ನಾವು ತೊಡಗಿದ್ದೇವೆ. ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News