×
Ad

ರೈಲಿನ ಎರಡು ಬೋಗಿಗಳಲ್ಲಿ ವಿದ್ಯುತ್ ವೈಫಲ್ಯ: ಟಿಕೆಟ್ ಕಲೆಕ್ಟರ್ ನನ್ನು ಶೌಚಾಲಯದಲ್ಲಿ ಕೂಡಿ ಹಾಕಿದ ಕುಪಿತ ಪ್ರಯಾಣಿಕರು

Update: 2023-08-12 23:17 IST

Screengrab : Twitter \ PTI 

ಹೊಸದಿಲ್ಲಿ: ವಿಚಿತ್ರ ಘಟನೆಯೊಂದರಲ್ಲಿ, ಸುಹೈಲ್ ದೇವ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನ ಎರಡು ಬೋಗಿಗಳಲ್ಲಿ ವಿದ್ಯುತ್ ವೈಫಲ್ಯವಾಗಿದ್ದರಿಂದ ಆಕ್ರೋಶಗೊಂಡ ಪ್ರಯಾಣಿಕರು ಟಿಕೆಟ್ ಕಲೆಕ್ಟರ್ ಒಬ್ಬರನ್ನು ಶೌಚಾಲಯದಲ್ಲಿ ಕೂಡಿ ಹಾಕಿರುವ ಘಟನೆ ನಡೆದಿದೆ. ವರದಿಗಳ ಪ್ರಕಾರ, ಈ ಘಟನೆಯು ಶುಕ್ರವಾರ ನಡೆದಿದ್ದು, ರೈಲು ದಿಲ್ಲಿಯ ಆನಂದ್ ವಿಹಾರ್ ಟರ್ಮಿನಲ್ ನಿಂದ ಘಾಝಿಪುರದ ಕಡೆಗೆ ಪ್ರಯಾಣ ಬೆಳೆಸುತ್ತಿತ್ತು ಎಂದು news18.com ವರದಿ ಮಾಡಿದೆ.

ಆನಂದ್ ವಿಹಾರ್ ಟರ್ಮಿನಲ್ ನಿಂದ ರೈಲು ನಿರ್ಗಮಿಸುತ್ತಿದ್ದಂತೆಯೆ, ರೈಲಿನ ಬಿ1 ಹಾಗೂ ಬಿ2 ಬೋಗಿಗಳಲ್ಲಿ ವಿದ್ಯುತ್ ವೈಫಲ್ಯವುಂಟಾಗಿ, ಹವಾನಿಯಂತ್ರಣ ವ್ಯವಸ್ಥೆಯ ಕಾರ್ಯಾಚರಣೆ ಸ್ಥಗಿತಗೊಂಡಿದೆ.

ಕುಪಿತಗೊಂಡ ಪ್ರಯಾಣಿಕರು ಈ ಘಟನೆಯ ಕುರಿತು ಟಿಕೆಟ್ ಕಲೆಕ್ಟರ್‍ ಗೆ ದೂರಿದ್ದಾರೆ. ಈ ಸಂದರ್ಭದಲ್ಲಿ ಗದ್ದಲ ಸೃಷ್ಟಿಸಿರುವ ಅವರು, ಟಿಕೆಟ್ ಕಲೆಕ್ಟರ್ ಅವರನ್ನು ಶೌಚಾಲಯದಲ್ಲಿ ಕೂಡಿ ಹಾಕಿದ್ದಾರೆ.

ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆ ವಿಡಿಯೊದಲ್ಲಿ ಪ್ರಯಾಣಿಕರು ಟಿಕೆಟ್ ಕಲೆಕ್ಟರ್ ಅವರನ್ನು ಶೌಚಾಲಯದಲ್ಲಿ ಕೂಡಿ ಹಾಕುವುದಕ್ಕೂ ಮುನ್ನ ಅವರಿಗೆ ಶೌಚಾಲಯದೊಳಗೆ ಹೋಗುವಂತೆ ಸೂಚಿಸುತ್ತಿರುವುದು ಸೆರೆಯಾಗಿದೆ.

ಅದೇ ವಿಡಿಯೊದಲ್ಲಿ, ತಾಂತ್ರಿಕ ಸಿಬ್ಬಂದಿಗಳು ವಿದ್ಯುತ್ ವ್ಯವಸ್ಥೆಯ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿರುವುದನ್ನೂ ಕಾಣಬಹುದಾಗಿದೆ.

ಇದಾದ ನಂತರ, ರೈಲು ತುಂಡ್ಲಾ ನಿಲ್ದಾಣವನ್ನು ತಲುಪಿದಾಗ, ರೈಲ್ವೆ ರಕ್ಷಣಾ ದಳದ ಪೊಲೀಸರು ಹಾಗೂ ರೈಲ್ವೆ ಅಧಿಕಾರಿಗಳು ಪ್ರಯಾಣಿಕರನ್ನು ಸಮಾಧಾನಗೊಳಿಸಿದ್ದು, ವಿದ್ಯುತ್ ವೈಫಲ್ಯವನ್ನು ಶೀಘ್ರವಾಗಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇದೇ ವೇಳೆ ಟಿಕೆಟ್ ಕಲೆಕ್ಟರ್ ಅನ್ನೂ ಕೂಡಾ ರಕ್ಷಿಸಲಾಗಿದ್ದು, ಎಂಜಿನಿಯರ್ ಗಳು ವಿದ್ಯುತ್ ವೈಫಲ್ಯದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News