×
Ad

ಬೆಟ್ಟಿಂಗ್ ಆ್ಯಪ್ ಪ್ರಕರಣ: ಈಡಿ ವಿಚಾರಣೆಗೆ ಹಾಜರಾದ ಪ್ರಕಾಶ್ ರಾಜ್

Update: 2025-07-30 13:42 IST

Screengrab:X/@ANI

ಹೈದರಾಬಾದ್: ಅಕ್ರಮ ಬೆಟ್ಟಿಂಗ್ ಆ್ಯಪ್ ಪರ ಪ್ರಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾದರು. ಅವರು ಇಂದು ಬೆಳಗ್ಗೆ ಸುಮಾರು 10 ಗಂಟೆಯ ವೇಳೆಗೆ ಬಶೀರ್ ಬಾಗ್ ನಲ್ಲಿರುವ ಪ್ರಾಂತೀಯ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿದರು.

ಕಳೆದ ಮಾರ್ಚ್ ತಿಂಗಳಲ್ಲಿ ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಚಾರ ಆರೋಪದ ಸಂಬಂಧ ನಟ ಪ್ರಕಾಶ್ ರಾಜ್ ಸೇರಿದಂತೆ ವಿವಿಧ ನಟರ ವಿರುದ್ಧ ಸೈಬರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಈ ಕುರಿತು ನಂತರ ಸ್ಪಷ್ಟೀಕರಣ ನೀಡಿದ್ದ ಪ್ರಕಾಶ್ ರಾಜ್, ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡುವುದು ಸೂಕ್ತವಲ್ಲ ಅನ್ನಿಸಿದ್ದರಿಂದ, ಆ ಆ್ಯಪ್ ನ ಪ್ರಚಾರದ ಗುತ್ತಿಗೆಯನ್ನು 2017ರ ನಂತರ ನಾನು ನವೀಕರಿಸಿಲ್ಲ ಎಂದು ಹೇಳಿದ್ದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಜಾರಿ ನಿರ್ದೇಶನಾಲಯ ನಟರಾದ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ ಹಾಗೂ ಮಂಚು ಲಕ್ಷ್ಮಿಗೆ ಸಮನ್ಸ್ ಜಾರಿಗೊಳಿಸಿತ್ತು. ಈ ವೇಳೆ, ಜುಲೈ 23ರಂದು ವಿಚಾರಣೆಗೆ ಹಾಜರಾಗುವಂತೆ ರಾಣಾ ದಗ್ಗುಬಾಟಿ ಅವರಿಗೆ ಸೂಚಿಸಲಾಗಿತ್ತು. ಆದರೆ, ಅವರು ಬೇರೊಂದು ದಿನಾಂಕಕ್ಕೆ ಮನವಿ ಮಾಡಿದ್ದರು. ಉಳಿದಂತೆ ವಿಜಯ್ ದೇವರಕೊಂಡ ಹಾಗೂ ಮಂಚು ಲಕ್ಷ್ಮಿ ಅವರಿಗೆ ಕ್ರಮವಾಗಿ ಆಗಸ್ಟ್ 6 ಮತ್ತು ಆಗಸ್ಟ್ 13ರಂದು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನ ನೀಡಲಾಗಿದೆ.

ಇದಕ್ಕೂ ಮುನ್ನ, ಸಾರ್ವಜನಿಕ ಜೂಜಾಟ ಕಾಯ್ದೆ, 1867 ಅನ್ನು ಉಲ್ಲಂಘಿಸಿರುವ ಅಕ್ರಮ ಬೆಟ್ಟಿಂಗ್ ಆ್ಯಪ್ ಅನ್ನು ಅನುಮೋದಿಸಿದ ಆರೋಪದ ಮೇಲೆ ನಟ/ನಟಿಯರು, ಇನ್ಫ್ಲುಯೆನ್ಸರ್ ಗಳು ಹಾಗೂ ಯೂಟ್ಯೂಬರ್ ಗಳು ಸೇರಿದಂತೆ ಒಟ್ಟು 29 ಮಂದಿಯ ವಿರುದ್ಧ ಜುಲೈ 10ರಂದು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿತ್ತು. ಈ ಪ್ರಕರಣವನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ತನಿಖೆ ನಡೆಸಲಾಗುತ್ತಿದ್ದು, ಆಂಧ್ರಪ್ರದೇಶದಲ್ಲಿ ದಾಖಲಾಗಿದ್ದ ಐದು ಎಫ್ಐಆರ್ ಗಳನ್ನು ಆಧರಿಸಿ ಈ ತನಿಖೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News