×
Ad

ಲಡಾಖ್ ಹತ್ಯೆಗಳ ಕುರಿತು ನ್ಯಾಯಾಂಗ ತನಿಖೆವರೆಗೂ ಜೈಲಿನಲ್ಲಿರಲು ಸಿದ್ಧ: ಸೋನಂ ವಾಂಗ್ಚುಕ್

Update: 2025-10-05 16:08 IST

ಸೋನಂ ವಾಂಗ್ಚುಕ್ | Photo Credit : PTI 

ಹೊಸದಿಲ್ಲಿ: ಲಡಾಖ್ ಹಿಂಸಾಚಾರದ ಸಂದರ್ಭದಲ್ಲಿ ನಾಲ್ವರ ಹತ್ಯೆ ಕುರಿತು ಸ್ವತಂತ್ರ ನ್ಯಾಯಾಂಗ ತನಿಖೆಗೆ ಆದೇಶಿಸುವವರೆಗೂ ಬಂಧನದಲ್ಲಿರಲು ಸಿದ್ಧನಿದ್ದೇನೆ ಎಂದು ಹವಾಮಾನ ಹೋರಾಟಗಾರ ಹಾಗೂ ಶಿಕ್ಷಣ ಸುಧಾರಕ ಸೋನಂ ವಾಂಗ್ಚುಕ್ ಅವರು ತನ್ನನ್ನಿರಿಸಲಾಗಿರುವ ಜೋಧಪುರ ಸೆಂಟ್ರಲ್ ಜೈಲಿನಿಂದ ಸಂದೇಶವನ್ನು ರವಾನಿಸಿದ್ದಾರೆ. ಸೆ.26ರಂದು ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ)ಯಡಿ ಬಂಧಿಸಲಾಗಿದೆ.

ಶನಿವಾರ ಜೈಲಿನಲ್ಲಿ ತನ್ನನ್ನು ಭೇಟಿಯಾದ ತನ್ನ ವಕೀಲ ಮುಸ್ತಫಾ ಹಾಜಿ ಮತ್ತು ಹಿರಿಯ ಸೋದರ ಕಾ ತ್ಸೆತಾನ್ ದೋರ್ಜೆ ಲೇ ಮೂಲಕ ವಾಂಗ್ಚುಕ್ ಈ ಸಂದೇಶವನ್ನು ರವಾನಿಸಿದ್ದಾರೆ.

ವಾಂಗ್ಚುಕ್ ಅವರನ್ನು ಎನ್‌ಎಸ್‌ಎ ಅಡಿ ಬಂಧಿಸಿರುವುದನ್ನು ಪ್ರಶ್ನಿಸಿ ಮತ್ತು ಅವರ ತಕ್ಷಣ ಬಿಡುಗಡೆಯನ್ನು ಕೋರಿ ಅವರ ಪತ್ನಿ ಗೀತಾಂಜಲಿ ಜೆ.ಆ್ಯಂಗ್ಮೊ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ನಡೆಸಲಿದೆ.

‘ನಮ್ಮ ನಾಲ್ಕು ಜನರ ಹತ್ಯೆ ಕುರಿತು ನ್ಯಾಯಾಂಗ ತನಿಖೆಯನ್ನು ನಡೆಸಬೇಕು ಮತ್ತು ಆವರೆಗೂ ಜೈಲಿನಲ್ಲಿಯೇ ಇರಲು ನಾನು ಸಿದ್ಧನಿದ್ದೇನೆ. ಲಡಾಖ್‌ಗೆ ಆರನೇ ಪರಿಚ್ಛೇಧ ಸ್ಥಾನಮಾನ ಮತ್ತು ರಾಜ್ಯತ್ವಕ್ಕಾಗಿ ನಮ್ಮ ಪ್ರಾಮಾಣಿಕವಾದ ಸಾಂವಿಧಾನಿಕ ಬೇಡಿಕೆಗಳ ವಿಷಯದಲ್ಲಿ ನಾನು ಲೇಹ್ ಅಪೆಕ್ಸ್ ಬಾಡಿ(ಎಲ್‌ಎಬಿ),ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್(ಕೆಡಿಎ) ಮತ್ತು ಲಡಾಖ್‌ನ ಜನರೊಂದಿಗೆ ದೃಢವಾಗಿ ನಿಲ್ಲುತ್ತೇನೆ. ಲಡಾಖ್‌ನ ಹಿತದೃಷ್ಟಿಯಿಂದ ಎಲ್‌ಎಬಿ ತೆಗೆದುಕೊಳ್ಳುವ ಯಾವುದೇ ಕ್ರಮಗಳನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ’ ಎಂದು ವಾಂಗ್ಚುಕ್ ಹೇಳಿದ್ದಾರೆ.

ಕೇಂದ್ರ ಸರಕಾರವು ಪ್ರಸ್ತಾವಿಸಿರುವ ಮಾತುಕತೆಗಳಿಂದ ಹಿಂದೆ ಸರಿದಿರುವ ಎಲ್‌ಎಬಿ ಮತ್ತು ಕೆಡಿಎ,ಬಂಧಿತ ಕಾರ್ಯಕರ್ತರ ಬಿಡುಗಡೆಯವರೆಗೆ ಮತ್ತು ನ್ಯಾಯಾಂಗ ವಿಚಾರಣೆ ನಡೆಸುವವರೆಗೆ ತಾವು ಮಾತುಕತೆಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿವೆ.

ತನ್ನ ಬಗ್ಗೆ ಜನರ ಕಾಳಜಿ ಮತ್ತು ಪ್ರಾರ್ಥನೆಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿರುವ ವಾಂಗ್ಚುಕ್,ತಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ. ಜೀವ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪಗಳನ್ನು ವ್ಯಕ್ತಪಡಿಸಿರುವ ಅವರು,ಗಾಯಾಳುಗಳು ಅಥವಾ ಬಂಧಿತರಿಗಾಗಿ ತಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಶಾಂತಿ ಮತ್ತು ಏಕತೆಯನ್ನು ಕಾಯ್ದುಕೊಳ್ಳುವಂತೆ ಹಾಗೂ ಗಾಂಧಿವಾದಿ ರೀತಿಯಲ್ಲಿ ಶಾಂತಿಯುತವಾಗಿ,ಅಹಿಂಸಾತ್ಮಕವಾಗಿ ಹೋರಾಟವನ್ನು ಮುಂದುವರಿಸುವಂತೆ ಅವರು ಜನತೆಯನ್ನು ಕೋರಿಕೊಂಡಿದ್ದಾರೆ.

ಲಡಾಖ್‌ಗೆ ಆರನೇ ಪರಿಚ್ಛೇದ ಸ್ಥಾನಮಾನ ಮತ್ತು ರಾಜ್ಯತ್ವಕ್ಕಾಗಿ ಒತ್ತಾಯಿಸಿ ನಡೆದ ಪ್ರತಿಭಟನೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News