ಕಳೆದ 11 ವರ್ಷಗಳಿಂದಲೂ ಸುದ್ದಿಗೋಷ್ಠಿ ನಡೆಸಲು ಪ್ರಧಾನಿ ಹಿಂಜರಿಯುತ್ತಿರುವುದೇಕೆ?: ಕಾಂಗ್ರೆಸ್ ಪ್ರಶ್ನೆ
ಜೈರಾಮ್ ರಮೇಶ್, ನರೇಂದ್ರ ಮೋದಿ | PC : PTI
ಹೊಸದಿಲ್ಲಿ: ತನ್ನ 11 ವರ್ಷಗಳ ಅಧಿಕಾರಾವಧಿಯಲ್ಲಿ ಮುಕ್ತ ಮತು ಪೂರ್ವ ರಚಿತ ವಲ್ಲದ ’ಸುದ್ದಿಗೋಷ್ಠಿಯನ್ನು ನಡೆಸದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತನ್ನ ದಾಳಿಯನ್ನು ಕಾಂಗ್ರೆಸ್ ಸೋಮವಾರ ಇನ್ನಷ್ಟು ತೀವ್ರಗೊಳಿಸಿದೆ. ಈಗಲೂ ಅವರು ಸುದ್ದಿಗೋಷ್ಠಿಯಿಂದ ಏಕೆ ದೂರ ಓಡುತ್ತಿದ್ದಾರೆ ಅಥವಾ ಪ್ರಶ್ನೋತ್ತರಗಳನ್ನು ಸಿದ್ಧಪಡಿಸಲು ಮತ್ತು ‘ ಜೀತದಾಳು ರೀತಿಯಲ್ಲಿ’ ತನ್ನನ್ನು ಪ್ರಶ್ನಿಸಲು ಸೂಕ್ತ ವ್ಯಕ್ತಿಗಳನ್ನು ಹುಡುಕಲು ಅವರು ಸಮಯ ತೆಗೆದುಕೊಳ್ಳುತ್ತಿದ್ದಾರೆಯೇ ಎಂದು ಅದು ಪ್ರಶ್ನಿಸಿದೆ.
11 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿರುವ ಸಂದರ್ಭದಲ್ಲಿ ಮೊದಲ ಮುಕ್ತ ಮತ್ತು ಪೂರ್ವ ರಚಿತ ವಲ್ಲದ ಸುದ್ದಿಗೋಷ್ಠಿಯನ್ನು ನಡೆಸುವಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ರವಿವಾರ ಮೋದಿಯವರಿಗೆ ಸವಾಲು ಹಾಕಿದ್ದರು.
‘11 ವರ್ಷಗಳ ಮಿಲ್‌ಸ್ಟೋನ್(ಮೈಲ್‌ಸ್ಟೋನ್ ಅಲ್ಲ) ಬಗ್ಗೆ ಹೇಳಿಕೊಳ್ಳಲು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇಂದು ಇಲ್ಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಆದರೆ ಮೋದಿ ಏಕೆ ಇನ್ನೂ ಸುದ್ದಿಗೋಷ್ಠಿಯಿಂದ ದೂರ ಓಡುತ್ತಿದ್ದಾರೆ? ಅವರಿಗೆ ತನಗೆ ಬೇಕಾದಂತೆ ಪ್ರಶ್ನೆಗಳನ್ನು ಕೇಳುವ ವ್ಯಕ್ತಿಗಳು ಸಿಕ್ಕಿಲ್ಲವೇ ಅಥವಾ ಭಾರತ ಮಂಟಪಂ ಇನ್ನೂ ಪೂರ್ಣವಾಗಿ ಸಿದ್ಧಗೊಂಡಿಲ್ಲವೇ?’ ಎಂದು ರಮೇಶ್ ಎಕ್ಸ್ ಪೋಸ್ಟ್‌ನಲ್ಲಿ ವ್ಯಂಗ್ಯವಾಡಿದ್ದಾರೆ.
11 ವರ್ಷಗಳ ಸಂಭ್ರಮ ಆಚರಿಸುತ್ತಿದ್ದಾರೆ, ಆದರೆ ಮುಕ್ತ, ಪೂರ್ವ ನಿರ್ಧರಿತವಲ್ಲದ ಸುದ್ದಿಗೋಷ್ಠಿ ನಡೆಸುವುದರಿಂದ ಪ್ರಧಾನಿ ಈಗಲೂ ‘ನೌ ದೋ ಗ್ಯಾರಾ’ ಆಗುತ್ತಿದ್ದಾರೆ. ಭಾರತ ಮಂಟಪಂ ಅವರಿಗಾಗಿ ಕಾಯುತ್ತಿದೆ ಎಂದು ರಮೇಶ್ ಕುಟುಕಿದ್ದಾರೆ.