×
Ad

ಪ್ರಮುಖ ರಾಷ್ಟ್ರೀಯ ಸಮಸ್ಯೆಗಳಿಂದ ನುಣುಚಿಕೊಂಡು ವಿದೇಶ ಪ್ರವಾಸಕ್ಕೆ ಪ್ರಧಾನಿ ಸಜ್ಜು: ಕಾಂಗ್ರೆಸ್ ಟೀಕೆ

Update: 2025-07-01 20:33 IST

ಜೈರಾಮ್ ರಮೇಶ್ | PTI 

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಮುಂಬರುವ ವಿದೇಶ ಪ್ರಯಾಣಕ್ಕೆ ಮುನ್ನ ಅವರ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿರುವ ಕಾಂಗ್ರೆಸ್ ಪಕ್ಷವು,ಅವರು ಪ್ರಮುಖ ರಾಷ್ಟ್ರೀಯ ಸಮಸ್ಯೆಗಳಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.

ಐದು ದೇಶಗಳಿಗೆ ಮೋದಿಯವರ ಎಂಟು ದಿನಗಳ ಪ್ರವಾಸವನ್ನು ಟೀಕಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್ ರಮೇಶ್ ಅವರು, ಅದನ್ನು ‘ವಿದೇಶ ವಿಹಾರ’ ಮತ್ತು ಮೋದಿಯವರನ್ನು ‘ಆಗಾಗ್ಗೆ ಹಾರಾಡುತ್ತಿರುವ ದುಬಾರಿ ಪ್ರಧಾನಿ’ ಎಂದು ಬಣ್ಣಿಸಿದ್ದಾರೆ. ಮೋದಿ ತನ್ನ ತಕ್ಷಣದ ಗಮನ ಅಗತ್ಯವಿರುವ ಪ್ರಮುಖ ದೇಶಿಯ ಸಮಸ್ಯೆಗಳಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಮಣಿಪುರದಲ್ಲಿಯ ದೀರ್ಘಕಾಲದ ಅಶಾಂತಿಯನ್ನು ಮೋದಿ ಕಡೆಗಣಿಸುತ್ತಿದ್ದಾರೆ ಎಂದು ರಮೇಶ್ ಎಕ್ಸ್ ಪೋಸ್ಟ್ನಲ್ಲಿ ಆರೋಪಿಸಿದ್ದಾರೆ. ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದ ಬಳಿಕ ಮೋದಿ ಅಲ್ಲಿಗೆ ಒಮ್ಮೆಯೂ ಭೇಟಿ ನೀಡಿಲ್ಲ.

ರಾಜ್ಯದಲ್ಲಿಯ ಡಬಲ್ ಇಂಜಿನ್ ಸರಕಾರವು ಹಳಿ ತಪ್ಪಿದೆ ಮತ್ತು ಸಾಮಾನ್ಯ ಜನಜೀವನ ಕುಸಿದಿದೆ ಎಂದು ರಮೇಶ್ ಕುಟುಕಿದ್ದಾರೆ.

ಇಂಡೋನೇಶ್ಯಾದಲ್ಲಿಯ ಭಾರತೀಯ ರಾಯಭಾರ ಕಚೇರಿಯ ಮಿಲಿಟರಿ ರಾಜತಾಂತ್ರಿಕ ಕ್ಯಾ.ಶಿವಕುಮಾರ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿರುವ ರಮೇಶ್, ಪ್ರಧಾನಿಯವರ ನಿರ್ಧಾರಗಳಿಂದಾಗಿ ‘ಆಪರೇಶನ್ ಸಿಂಧೂರ್ʼನ ಆರಂಭಿಕ ಹಂತಗಳಲ್ಲಿ ದೇಶವು ಮಿಲಿಟರಿ ಹಿನ್ನಡೆಯನ್ನು ಅನುಭವಿಸಿತ್ತು ಎಂದು ಹೇಳಿದರು.

ಆದರೆ ಇಂಡೋನೇಶ್ಯಾದಲ್ಲಿಯ ಭಾರತೀಯ ರಾಯಭಾರ ಕಚೇರಿಯು ಈ ಹೇಳಿಕೆಗಳನ್ನು ತಪ್ಪಾಗಿ ನಿರೂಪಿಸಲಾಗಿದೆ ಮತ್ತು ಸಂದರ್ಭಕ್ಕೆ ಹೊರತಾಗಿವೆ ಎಂದು ಸ್ಪಷ್ಟಪಡಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮಕ್ಕೆ ತಾನು ಮಧ್ಯಸ್ಥಿಕೆ ವಹಿಸಿದ್ದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುನರಪಿ ಹೇಳಿಕೆಗಳನ್ನು ಉಲ್ಲೇಖಿಸಿರುವ ರಮೇಶ್,ಈ ಪ್ರತಿಪಾದನೆಯನ್ನು ಸಮರ್ಥವಾಗಿ ಅಲ್ಲಗಳೆಯಲು ಸರಕಾರವು ವಿಫಲಗೊಂಡಿದೆ ಎಂದಿದ್ದಾರೆ.

ಮೋದಿ ಜುಲೈ 2ರಿಂದ ಎಂಟು ದಿನಗಳ ತನ್ನ ವಿದೇಶ ಪ್ರವಾಸದಲ್ಲಿ ಘಾನಾ, ಟ್ರಿನಿದಾದ್ ಮತ್ತು ಟೊಬಾಗೋ, ಅಜೆಂಟಿನಾ, ಬ್ರಝಿಲ್ ಮತ್ತು ನಮೀಬಿಯಾಕ್ಕೆ ಭೇಟಿ ನೀಡಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News