ಪ್ರಧಾನಿ ಮೋದಿಗೆ ಸೈಪ್ರಸ್ ನ ಅತ್ಯುನ್ನತ ನಾಗರಿಕ ಗೌರವ ಪ್ರದಾನ; ಭಾರತದ ಜನತೆಗೆ ಅರ್ಪಣೆ
PC : PTI
ನಿಕೋಸಿಯಾ: ರಿಪಬ್ಲಿಕ್ ಆಫ್ ಸೈಪ್ರಸ್ನ ಅತ್ಯುನ್ನತ ನಾಗರಿಕ ಗೌರವವಾದ ‘ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕಾರಿಯೊಸ್ III ’ ಅನ್ನು ಸೋಮವಾರ ಇಲ್ಲಿ ಪ್ರದಾನಿಸಲಾಯಿತು.
ದೇಶಕ್ಕೆ ಮೋದಿಯವರ ಅಧಿಕೃತ ಭೇಟಿ ಸಂದರ್ಭದಲ್ಲಿ ಸೈಪ್ರಸ್ ಅಧ್ಯಕ್ಷ ನಿಕೋಸ್ ಕ್ರಿಸ್ಟೊಡೊಲಿಡಿಸ್ ಅವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
140 ಕೋ.ಭಾರತೀಯರ ಪರವಾಗಿ ಗೌರವವನ್ನು ಸ್ವೀಕರಿಸಿ ಮಾತನಾಡಿದ ಮೋದಿ ಸೈಪ್ರಸ್ ಅಧ್ಯಕ್ಷ, ಸರಕಾರ ಮತ್ತು ಜನತೆಗೆ ಧನ್ಯವಾದಗಳನ್ನು ಸಲ್ಲಿಸಿದರು. ಈ ಮನ್ನಣೆಯು ಪರಸ್ಪರ ಹಂಚಿಕೊಂಡಿರುವ ಪ್ರಜಾಸತ್ತಾತ್ಮಕ ಮೌಲ್ಯಗಳು, ಪರಸ್ಪರ ನಂಬಿಕೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಹಕಾರದ ಮೇಲೆ ಸ್ಥಾಪಿತ ಉಭಯ ದೇಶಗಳ ನಡುವಿನ ಶಾಶ್ವತ ಸ್ನೇಹಕ್ಕೆ ಗೌರವವಾಗಿದೆ ಎಂದು ಹೇಳಿದರು.
‘ಈ ಗೌರವವು ಕೇವಲ ನನಗಾಗಿ ಅಲ್ಲ, ಅದು 140 ಕೋ.ಭಾರತೀಯರಿಗೆ ಸಲ್ಲುತ್ತದೆ’ಎಂದು ಹೇಳಿದ ಮೋದಿ, ‘ಇದು ಜಾಗತಿಕ ಶಾಂತಿ, ಪ್ರಗತಿ ಮತ್ತು ಸಹಕಾರಕ್ಕಾಗಿ ಭಾರತದ ಕಾರ್ಯವಿಧಾನದಲ್ಲಿ ನಿರಂತರ ಮಾರ್ಗದರ್ಶಕವಾಗಿರುವ ವಸುಧೈವ ಕುಟುಂಬಕಂ-ಜಗತ್ತು ಒಂದು ಕುಟುಂಬ ಎಂಬ ನಮ್ಮ ನಾಗರಿಕತೆಯ ನೀತಿಯನ್ನು ಪ್ರತಿಬಿಂಬಿಸುತ್ತದೆ ’ ಎಂದರು.
ಗ್ರ್ಯಾಂಡ್ ಕ್ರಾಸ್ನ್ನು ಅವರು ಭಾರತ ಮತ್ತು ಸೈಪ್ರಸ್ ನಡುವೆ ಗಾಢಗೊಳ್ಳುತ್ತಿರುವ ಸಂಬಂಧಗಳ ದ್ಯೋತಕ ಹಾಗೂ ಶಾಂತಿ, ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆ ಮತ್ತು ಸಮೃದ್ಧಿಯನ್ನು ಎತ್ತುಹಿಡಿಯಲು ಪರಸ್ಪರ ಹಂಚಿಕೊಂಡಿರುವ ಬದ್ಧತೆಯ ಪುನರುಚ್ಚರಣೆ ಎಂದು ಬಣ್ಣಿಸಿದರು.
1981ರಲ್ಲಿ ಆಗಿನ ಅಧ್ಯಕ್ಷ ಸ್ಪೈರೋಸ್ ಕಿಪ್ರಿಯಾನು ಅವರು ಸ್ಥಾಪಿಸಿದ ‘ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕಾರಿಯೊಸ್ III ’ ಸೈಪ್ರಸ್ ನೀಡುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ. ಸೈಪ್ರಸ್ ಗಣರಾಜ್ಯದ ಸಂವಿಧಾನದ ವಿಧಿ 47ಬಿ ಅಡಿ ನೀಡಲಾಗುವ ಈ ಪ್ರಶಸ್ತಿಯು ದ್ವಿಪಕ್ಷೀಯ ಸಂಬಂಧಗಳನ್ನು ಬಲಗೊಳಿಸಲು ಮತ್ತು ಜಾಗತಿಕ ಸದ್ಭಾವನೆಯನ್ನು ಉತ್ತೇಜಿಸಲು ಕೊಡುಗೆ ನೀಡಿದ ಗಣ್ಯ ವ್ಯಕ್ತಿಗಳಿಗೆ ಮೀಸಲಾಗಿದೆ.
ಆರ್ಥಿಕ ಪಾಲ್ಗೊಳ್ಳುವಿಕೆಯಿಂದ ಹಿಡಿದು ಸಾಂಸ್ಕೃತಿಕ ಸಂಬಂಧಗಳು ಮತ್ತು ವಿನೂತನತೆಯವರೆಗೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಉಭಯ ದೇಶಗಳು ಮುಂದಾಗಿರುವ ಸಂದರ್ಭದಲ್ಲಿ ಮೋದಿ ಸೈಪ್ರಸ್ಗೆ ಭೇಟಿ ನೀಡಿದ್ದಾರೆ.