ರಾಜ್ ಘಾಟ್ ನಲ್ಲಿ ಮಹಾತ್ಮಾ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ
ನರೇಂದ್ರ ಮೋದಿ | Photo: X \ @narendramodi
ಹೊಸದಿಲ್ಲಿ : ಮಹಾತ್ಮಾ ಗಾಂಧಿ ಅವರ 154ನೇ ಜನ್ಮ ದಿನವಾದ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ ಘಾಟ್ ಗೆ ತೆರಳಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಮಹಾತ್ಮಾ ಗಾಂಧಿ ಅವರಿಗೆ ಗೌರವ ನಮನ ಸಲ್ಲಿಸುವ ಮೊದಲು ಪ್ರಧಾನಿ ಅವರು, ‘‘ಅವರ ಜನ್ಮ ದಿನಾಚರಣೆಯ ಈ ವಿಶೇಷ ಸಂದರ್ಭದಲ್ಲಿ ನಾನು ಅವರಿಗೆ ತಲೆ ಬಾಗುತ್ತೇನೆ. ಅವರ ಕಾಲಾತೀತ ಬೋಧನೆಗಳು ನಮ್ಮ ದಾರಿಗೆ ನಿರಂತರ ಬೆಳಕು ಚೆಲ್ಲುತ್ತಿವೆ. ಮಹಾತ್ಮಾ ಗಾಂಧಿ ಅವರ ಜಾಗತಿಕ ಪ್ರಭಾವ ಮಾನವ ಕುಲದಲ್ಲಿ ಏಕತೆ ಹಾಗೂ ಸಹಾನುಭೂತಿ ಮನೋಭಾವವನ್ನು ಪ್ರೇರೇಪಿಸಿದೆ’’ ಎಂದು ‘x’ನಲ್ಲಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಲ್ಲದೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಹಾಗೂ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಕೂಡ ರಾಜ್ಘಾಟ್ನಲ್ಲಿರುವ ಮಹಾತ್ಮಾ ಗಾಂಧಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ರಾಜ್ ಘಾಟ್ ಗೆ ತೆರಳಿ ಮಹಾತ್ಮಾ ಗಾಂಧಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.