ಕೇರಳ | ಪದ್ಮಶ್ರೀ ಪುರಸ್ಕೃತ ಚೆರುವಯಲ್ ರಾಮನ್ ಮನೆಗೆ ಪ್ರಿಯಾಂಕಾ ಗಾಂಧಿ ಭೇಟಿ
ಪ್ರಿಯಾಂಕಾ ಗಾಂಧಿ | PC : @IYC
ವಯನಾಡ್, ಸೆ. 17: ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭ ಕೇರಳದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚೆರುವಯಲ್ ರಾಮನ್ ಅವರ ನಿವಾಸದಲ್ಲಿ ಸುಮಾರು ಎರಡೂವರೆ ಗಂಟೆಗಳನ್ನು ಕಳೆದಿದ್ದಾರೆ.
ಬುಡಕಟ್ಟು ಸಮುದಾಯಕ್ಕೆ ಸೇರಿದ ರಾಮನ್ ಅವರು ಭತ್ತ ಬೆಳೆಯುವ ರೈತ. ರಾಮನ್ ಅವರಿಗೆ ಭತ್ತದ ಕುರಿತು ಇರುವ ಜ್ಞಾನದಿಂದ ಅವರನ್ನು ‘ಬೀಜಗಳ ರಕ್ಷಕ’ ಎಂದು ಕರೆಯಲಾಗುತ್ತದೆ. ಇವರು 60 ಬಗೆಯ ಭತ್ತದ ಬೀಜಗಳನ್ನು ಸಂರಕ್ಷಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರು ರಾಮನ್ ಅವರ ಭತ್ತದ ಗದ್ದೆಗಳಲ್ಲಿ ಒಡಾಡಿದ್ದಾರೆ. ಅವರ ಅನನ್ಯ ಕೃಷಿ ವಿಧಾನದ ಕುರಿತು ತಿಳಿದುಕೊಂಡಿದ್ದಾರೆ. ವಿವಿಧ ತಳಿಯ ಭತ್ತದ ಬೀಜಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ರಾಮನ್ ಅವರು ಪ್ರಿಯಾಂಕಾ ಗಾಂಧಿ ಅವರಿಗೆ ಸಾಂಪ್ರದಾಯಿಕ ಜಾನಪದ ಹಾಡುಗಳನ್ನು ಕೇಳಿಸಿದರು. ಅನಂತರ ತಾನೇ ಒಂದು ಹಾಡು ಹಾಡಿದರು. ಪ್ರಿಯಾಂಕಾ ಅವರು ರಾಮನ್ ಮಾರ್ಗದರ್ಶನಲ್ಲಿ ಬುಡಕಟ್ಟಿನ ಸಾಂಪ್ರದಾಯಿಕ ಬಿಲ್ಲು ಬಾಣವನ್ನು ಪ್ರಯೋಗಿಸಲು ಪ್ರಯತ್ನಿಸಿದರು. ಬಳಿಕ ಹಿಂದಿರುಗಿದರು.
ಜೈವಿಕ ಹಾಗೂ ಸುಸ್ಥಿರ ಕೃಷಿ ವಿಧಾನಗಳ ಮೂಲಕ ವಿವಿಧ ಭತ್ತದ ತಳಿಗಳನ್ನು ಸಂರಕ್ಷಿಸುತ್ತಿರುವುದು ಹಾಗೂ ಬೆಳೆಸುತ್ತಿರುವುದಕ್ಕಾಗಿ ರಾಮನ್ ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.