ಉದ್ದೇಶಿತ ನರೇಗಾ ಮರುನಾಮಕರಣದಿಂದ ಏನು ಪ್ರಯೋಜನ?: ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ | Photo Credit : PTI
ಹೊಸದಿಲ್ಲಿ,ಡಿ.13: ನರೇಗಾ ಯೋಜನೆಯ ಮರುನಾಮಕರಣ ಪ್ರಸ್ತಾವವನ್ನು ಶನಿವಾರ ಪ್ರಶ್ನಿಸಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು,ಈ ಕ್ರಮವು ಯಾವುದೇ ಸ್ಪಷ್ಟ ಲಾಭವನ್ನು ನೀಡುವುದಿಲ್ಲ ಮತ್ತು ಸರಕಾರಿ ಸಂಪನ್ಮೂಲಗಳ ಅನಗತ್ಯ ವೆಚ್ಚಕ್ಕೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,2005ರಲ್ಲಿ ಜಾರಿಗೊಂಡಿದ್ದ ಪ್ರಮುಖ ಗ್ರಾಮೀಣ ಉದ್ಯೋಗ ಕಾರ್ಯಕ್ರಮದ ಹೆಸರನ್ನು ಬದಲಿಸುವುದರ ಹಿಂದಿನ ತಾರ್ಕಿಕತೆ ತನಗೆ ಅರ್ಥವಾಗಿಲ್ಲ ಎಂದು ಹೇಳಿದರು.
‘ಇದರ ಹಿಂದೆ ಯಾವ ಮನಃಸ್ಥಿತಿ ಇದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಮೊದಲನೆಯದಾಗಿ ಯೋಜನೆಯು ಮಹಾತ್ಮಾ ಗಾಂಧಿಯವರ ಹೆಸರನ್ನು ಹೊಂದಿದೆ ಮತ್ತು ಅದನ್ನು ಬದಲಿಸಿದಾಗ ಅದಕ್ಕಾಗಿ ಮತ್ತೆ ಸರಕಾರದ ಸಂಪನ್ಮೂಲಗಳನ್ನು ವೆಚ್ಚ ಮಾಡಲಾಗುತ್ತದೆ. ಕಚೇರಿಗಳಿಂದ ಹಿಡಿದು ಸ್ಟೇಷನರಿವರೆಗೆ ಪ್ರತಿಯೊಂದನ್ನೂ ಮರುನಾಮಕರಣ ಮಾಡಬೇಕಾಗುತ್ತದೆ,ಇದು ಬೃಹತ್ ಮತ್ತು ದುಬಾರಿ ಪ್ರಕ್ರಿಯೆಯಾಗಿದೆ’ ಎಂದು ಹೇಳಿದ ಅವರು,‘ಹೀಗಾಗಿ ಅನಗತ್ಯವಾಗಿ ಇದನ್ನು ಮಾಡುವುದರಿಂದ ಏನು ಪ್ರಯೋಜನ? ನನಗೆ ಅರ್ಥವಾಗುತ್ತಿಲ್ಲ’ ಎಂದರು.
ಇತರ ಪ್ರತಿಪಕ್ಷಗಳೂ ಮರುನಾಮಕರಣ ಪ್ರಸ್ತಾವವನ್ನು ಟೀಕಿಸಿವೆ.