ಬಿಹಾರ ಮತದಾರರ ಅಧಿಕಾರ ಯಾತ್ರೆ : ರಾಹುಲ್ ಜೊತೆ ಸೇರಿಕೊಂಡ ಪ್ರಿಯಾಂಕಾ, ರೇವಂತ್ ರೆಡ್ಡಿ
Photo credit: PTI
ಸುಪೌಲ್(ಬಿಹಾರ): ಬಿಹಾರದಲ್ಲಿ ರಾಹುಲ್ ಗಾಂಧಿ ನಡೆಸುತ್ತಿರುವ ಮತದಾರರ ಅಧಿಕಾರ ಯಾತ್ರೆಯಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ಪಾಲ್ಗೊಂಡಿದ್ದಾರೆ.
ಒಂದು ದಿನದ ವಿರಾಮದ ಬಳಿಕ ಮಂಗಳವಾರ ಪುನರಾರಂಭಗೊಂಡಿರುವ ಯಾತ್ರೆಯಲ್ಲಿ ಪ್ರಿಯಾಂಕಾ ಗಾಂಧಿ ಸಹಿತ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತು ಹಲವು ನಾಯಕರು ಭಾಗವಹಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಬಿಹಾರದ ಇಂಡಿಯಾ ಬಣದ ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿವೆ. ಇಂಡಿಯಾ ಬಣವು ಶೀಘ್ರದಲ್ಲೇ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ ಎಂದು ರವಿವಾರ ಸುದ್ದಿಗೋಷ್ಟಿಯಲ್ಲಿ ರಾಹುಲ್ ಗಾಂಧಿ ಹೇಳಿದ್ದರು.
ಕೇಂದ್ರದಲ್ಲಿರುವ ಎನ್‌ಡಿಎ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದ ಅವರು, ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯು ಬಿಜೆಪಿಗೆ ಸಹಾಯ ಮಾಡಲು ಮತಗಳನ್ನು ಕದಿಯಲು ಚುನಾವಣಾ ಆಯೋಗದ ಸಾಂಸ್ಥಿಕ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದರು.
ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಗಾಂಧಿ 'ಮತದಾರ ಅಧಿಕಾರ ಯಾತ್ರೆ'ಯನ್ನು ಪ್ರಾರಂಭಿಸಿದ್ದು, ಸೆಪ್ಟೆಂಬರ್ 1ರಂದು ಪಟ್ನಾದಲ್ಲಿ ಯಾತ್ರೆ ಸಮಾರೋಪಗೊಳ್ಳಲಿದೆ.