×
Ad

"ಹಸಿವಿನಿಂದ ನೂರಾರು ಜನರು ಸಾಯುತ್ತಿದ್ದಾರೆ": ಗಾಝಾ ಮೇಲಿನ ಇಸ್ರೇಲ್‌ ದಾಳಿಗಳ ಕುರಿತು ಕೇಂದ್ರ ಸರ್ಕಾರದ ಮೌನ ಪ್ರಶ್ನಿಸಿದ ಪ್ರಿಯಾಂಕಾ ಗಾಂಧಿ

ಐವರು ಅಲ್ ಜಝೀರಾ ಪತ್ರಕರ್ತರ ಹತ್ಯೆಯನ್ನು ನಿರ್ದಯ ಕೊಲೆ ಎಂದ ಕಾಂಗ್ರೆಸ್‌ ನಾಯಕಿ

Update: 2025-08-12 17:11 IST

ಪ್ರಿಯಾಂಕಾ ಗಾಂಧಿ (Photo: PTI)

ಹೊಸದಿಲ್ಲಿ: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಗಳನ್ನು ʼನರಮೇಧʼ ಎಂದು ಖಂಡಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಫೆಲೆಸ್ತೀನ್ ಜನರ ಮೇಲೆ ನಡೆಯುತ್ತಿರುವ ವಿನಾಶಕಾರಿ ಕ್ರಮಗಳ ನಡುವೆಯೂ ಮೌನ ವಹಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಮಂಗಳವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

X ನಲ್ಲಿನ ತಮ್ಮ ಖಾತೆಯಲ್ಲಿ ಕುರಿತು ಪೋಸ್ಟ್ ಮಾಡಿರುವ ಪ್ರಿಯಾಂಕಾ ಗಾಂಧಿ ಅವರು, “60,000 ಕ್ಕೂ ಹೆಚ್ಚು ಜನರನ್ನು ಇಸ್ರೇಲ್ ಹತ್ಯೆ ಮಾಡಿದೆ. ಅವರಲ್ಲಿ 18,430 ಮಕ್ಕಳು ಸೇರಿದ್ದಾರೆ. ಆ ದೇಶವು ನೂರಾರು ಜನರನ್ನು ಹಸಿವಿನಿಂದ ಸಾಯಿಸಿದೆ, ಲಕ್ಷಾಂತರ ಜನರನ್ನು ಹಸಿವಿನಿಂದ ಸಾಯಿಸುವ ಬೆದರಿಕೆ ಹಾಕುತ್ತಿದೆ” ಎಂದು ಆರೋಪಿಸಿದರು. “ಮೌನ ಮತ್ತು ನಿಷ್ಕ್ರಿಯತೆಯಿಂದ ಇಂತಹ ಅಪರಾಧಗಳನ್ನು ಪ್ರೋತ್ಸಾಹಿಸುವುದು ಸ್ವತಃ ಅಪರಾಧ” ಎಂದು ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

"ಫೆಲೆಸ್ತೀನ್ ವಿರುದ್ಧ ಇಸ್ರೇಲ್ ಕೈಗೊಂಡಿರುವ ವಿನಾಶಕಾರಿ ಕ್ರಮಗಳ ನಡುವೆಯೂ ಕೇಂದ್ರ ಸರ್ಕಾರ ಮೌನವಾಗಿರುವುದು ನಾಚಿಕೆಗೇಡಿನ ಸಂಗತಿ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ, ಐದು ಅಲ್ ಜಝೀರಾ ಪತ್ರಕರ್ತರ ಹತ್ಯೆಯನ್ನು ನಿರ್ದಯ ಕೊಲೆ ಎಂದ ಅವರು, ಫೆಲೆಸ್ತೀನ್ ನೆಲದಲ್ಲಿ ನಡೆದ ಮತ್ತೊಂದು ಘೋರ ಅಪರಾಧ ಎಂದು ಪ್ರಿಯಾಂಕಾ ಗಾಂಧಿ ಖಂಡಿಸಿದ್ದಾರೆ. “ಸತ್ಯಕ್ಕಾಗಿ ನಿಲ್ಲುವವರ ಧೈರ್ಯವನ್ನು ಇಸ್ರೇಲ್ ದೇಶದ ಹಿಂಸಾಚಾರ ಮತ್ತು ದ್ವೇಷ ಎಂದಿಗೂ ಮುರಿಯಲು ಸಾಧ್ಯವಿಲ್ಲ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಲ್ ಜಝೀರಾ ಪ್ರಕಾರ, ಗಾಝಾ ನಗರದಲ್ಲಿ ಪತ್ರಕರ್ತರಿಗೆ ವಸತಿ ಕಲ್ಪಿಸಲಾಗಿದ್ದ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಪತ್ರಕರ್ತ ಅನಸ್ ಅಲ್-ಶರೀಫ್ ಸೇರಿದಂತೆ ಐವರು ಸಾವನ್ನಪ್ಪಿದ್ದರು.

"ಅಧಿಕಾರ ಮತ್ತು ಹಣದಾಸೆಗೆ ಗುಲಾಮರಾಗಿರುವ ಮಾಧ್ಯಮಗಳ ನಡುವೆ, ಈ ಧೈರ್ಯಶಾಲಿ ಪತ್ರಕರ್ತರು ನಿಜವಾದ ಪತ್ರಿಕೋದ್ಯಮವನ್ನು ನೆನಪಿಸಿದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಪ್ರಿಯಾಂಕಾ ಗಾಂಧಿ ಸಂತಾಪ ಸೂಚಿಸಿದ್ದಾರೆ.

ರವಿವಾರ ಪತ್ರಕರ್ತರ ಮೇಲೆ ನಡೆದ ಈ ದಾಳಿಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯು ಸೋಮವಾರ ಖಂಡಿಸಿದ್ದು, ಇದು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಗಂಭೀರ ಉಲ್ಲಂಘನೆ ಎಂದು ಘೋಷಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News