ಬಿಹಾರ ಎಸ್‌ಐಆರ್ ತುಂಬ ಗಂಭೀರ ವಿಷಯ, ಸರಕಾರ ಚರ್ಚೆಗೆ ಒಪ್ಪಬೇಕು: ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ | PTI
ಹೊಸದಿಲ್ಲಿ,ಆ.4: ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್)ಯು ಗಂಭೀರ ವಿಷಯವಾಗಿದೆ. ಸರಕಾರವು ಅದರ ಬಗ್ಗೆ ಚರ್ಚೆಗೆ ಒಪ್ಪಿಕೊಳ್ಳಬೇಕು ಮತ್ತು ಮುಂದುವರಿಯಬೇಕು ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೋಮವಾರ ಇಲ್ಲಿ ಹೇಳಿದರು.
ಸಂಸತ್ ಭವನ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಪ್ರತಿಪಕ್ಷಗಳು ಎಸ್‌ಐಆರ್ ವಿಷಯವನ್ನು ಎತ್ತುವುದನ್ನು ಕುರಿತು ಪ್ರಶ್ನೆಗೆ, ಎಸ್‌ಐಆರ್ ಅತ್ಯಂತ ಗಂಭೀರ ವಿಷಯವಾಗಿದ್ದು,ಅದು ಮತದಾರರ ಪಟ್ಟಿಗಳಿಗೆ ಸಂಬಂಧಿಸಿರುವಾಗ ಪ್ರತಿಪಕ್ಷಗಳು ಅದನ್ನು ಎತ್ತುವುದನ್ನು ಏಕೆ ಮುಂದುವರಿಸಬಾರದು ಎಂದು ಮರುಪ್ರಶ್ನಿಸಿದರು.
ಬಿಹಾರದಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣೆ ಕುರಿತು ಪ್ರತಿಪಕ್ಷಗಳ ಪ್ರತಿಭಟನೆಯಿಂದಾಗಿ ಸೋಮವಾರ ಲೋಕಸಭೆಯು ದಿನದ ಮಟ್ಟಿಗೆ ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ ಪ್ರಿಯಾಂಕಾರ ಈ ಹೇಳಿಕೆಗಳು ಹೊರಬಿದ್ದಿವೆ.
ಬಿಹಾರದಲ್ಲಿ ಎಸ್‌ಐಆರ್ ವಿರುದ್ಧ ಮತ್ತು ಅದನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿ ಇಂಡಿಯಾ ಮೈತ್ರಿಕೂಟದ ಹಲವಾರು ಸಂಸದರು ಪ್ರತಿದಿನ ಸಂಸತ್ ಭವನ ಸಂಕೀರ್ಣದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದಾಗ್ಯೂ ಮಾಜಿ ಜಾರ್ಖಂಡ್ ಮುಖ್ಯಮಂತ್ರಿ ಶಿಬು ಸೊರೇನ್ ಅವರ ನಿಧನದ ಹಿನ್ನೆಲೆಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿಲ್ಲ.