×
Ad

ಮಹಾರಾಷ್ಟ್ರ | ಮುಸ್ಲಿಮರದ್ದು ಎಂದು ತಪ್ಪಾಗಿ ಭಾವಿಸಿ ಹಿಂದೂ ವ್ಯಕ್ತಿಯ ಬೇಕರಿ ಅಂಗಡಿಯನ್ನು ಸುಟ್ಟು ಹಾಕಿದ ಗುಂಪು; ವರದಿ

Update: 2025-08-04 12:12 IST

ಸಾಂದರ್ಭಿಕ ಚಿತ್ರ

ಪುಣೆ : ಮಹಾರಾಷ್ಟ್ರದ ಪುಣೆಯಲ್ಲಿ ಮುಸ್ಲಿಮರಿಗೆ ಸೇರಿದ್ದು ಎಂದು ತಪ್ಪಾಗಿ ಗ್ರಹಿಸಿ ಹಿಂದೂ ವ್ಯಕ್ತಿಯ ಬೇಕರಿ ಅಂಗಡಿಯನ್ನು ಗುಂಪೊಂದು ಸುಟ್ಟು ಹಾಕಿದೆ ಎಂದು ವರದಿಯಾಗಿದೆ.

ಯಾವತ್ ಗ್ರಾಮದ ನಿವಾಸಿಸ್ವಪ್ನಿಲ್ ಆದಿನಾಥ್ ಕದಮ್ ಅವರಿಗೆ ಸೇರಿದ ಬೇಕರಿಯನ್ನು ಗುಂಪೊಂದು ಬೆಂಕಿ ಹಚ್ಚಿ ಸುಟ್ಟು ಹಾಕಿದೆ. ಜೀವನೋಪಾಯದ ಮೂಲವನ್ನು ಕಳೆದುಕೊಂಡು ಸ್ವಪ್ನಿಲ್ ಕುಟುಂಬ ಆಘಾತಕ್ಕೊಳಗಾಗಿದೆ.

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಮುಸ್ಲಿಂ ಯುವಕನೋರ್ವನ ಪ್ರಚೋದನಕಾರಿ ಪೋಸ್ಟ್ ವೈರಲ್ ಆಗಿತ್ತು. ಇದಲ್ಲದೆ ಆ ಪ್ರದೇಶದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಹಾನಿಯಾಗಿದೆ ಎಂದು ವದಂತಿಗಳು ಹರಡಿದ್ದವು. ಇದರ ಬೆನ್ನಲ್ಲೇ ಪ್ರತಿಭಟನೆ ನಡೆದು ಆ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ. ಗುಂಪು ಸ್ಥಳೀಯ ಮಸೀದಿ ಬಳಿ ಸಾಗುವಾಗ ಮುಸ್ಲಿಮರದ್ದು ಎಂದು ಸ್ವಪ್ನಿಲ್ ಕದಮ್ ಅವರ ಬೇಕರಿಗೆ ಬೆಂಕಿ ಹಚ್ಚಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸ್ವಪ್ನಿಲ್ ಕದಮ್, ನನ್ನ ಬೇಕರಿಯಲ್ಲಿ ಉತ್ತರ ಪ್ರದೇಶದ ಕೆಲವು ಮುಸ್ಲಿಂ ಕಾರ್ಮಿಕರು ಕೆಲಸ ಮಾಡುತ್ತಿರುವುದು ನಿಜ. ಇದರಿಂದ ಗುಂಪಿನಲ್ಲಿದ್ದ ವ್ಯಕ್ತಿಯೋರ್ವ ಇದು ಮುಸ್ಲಿಮರ ಅಂಗಡಿ ಎಂದು ಕೂಗಿದ್ದಾನೆ. ಈ ವೇಳೆ ಏನೂ ವಿಚಾರಿಸದೇ ಅವರು ನನ್ನನ್ನು ಮುಸ್ಲಿಂ ಎಂದು ಭಾವಿಸಿ ಅಂಗಡಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬೇಕರಿ ಅಂಗಡಿಯ ತಗಡಿನ ಶೀಟ್‌ಗಳನ್ನು ಕಿತ್ತುಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ಹೇಳಿದ್ದಾರೆ.

ಹಿಂಸಾಚಾರಕ್ಕೆ ಕಾರಣವಾದ ವಿವಾದಾತ್ಮಕ ಪೋಸ್ಟ್‌ಗೆ ಮತ್ತು ನನಗೆ ಅಥವಾ ನನ್ನ ಉದ್ಯೋಗಿಗಳಿಗೂ ಯಾವುದೇ ಸಂಬಂಧವಿಲ್ಲ. ಅವರು ಇಲ್ಲಿ ಕೆಲಸ ಮಾಡುತ್ತಾರೆ. ಬೇರೆ ಯಾವುದೇ ಕೋಮು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ. ನನ್ನ ಜೀವನಾಧಾರವಾಗಿದ್ದ ಬೇಕರಿ ಈಗ ಸಂಪೂರ್ಣವಾಗಿ ನಾಶವಾಗಿದೆ ಎಂದು ಸ್ವಪ್ನಿಲ್ ಕದಮ್ ಹೇಳಿದ್ದಾರೆ.

ಸ್ಥಳೀಯ ಪೊಲೀಸರು ಈ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಜಿಲ್ಲಾಡಳಿತವು ಶಾಂತಿ ಕಾಪಾಡುವಂತೆ ಮನವಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News