ವೈದ್ಯೆಯ ಹಿಜಾಬ್ ಎಳೆದ ಪ್ರಕರಣ | ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಖಂಡನೆ
ನಿತೀಶ್ ಕುಮಾರ್ ಕ್ಷಮೆ ಯಾಚಿಸುವಂತೆ ಆಗ್ರಹ
ನಿತೀಶ್ ಕುಮಾರ್ | Photo Credit : PTI
ಪಾಟ್ನಾ, ಡಿ. 20: ಡಿಸೆಂಬರ್ 15ರಂದು ಪಾಟ್ನಾದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ವೈದ್ಯೆಯ ಹಿಜಾಬ್ ಅನ್ನು ಎಳೆಯಲು ಪ್ರಯತ್ನಿಸಿದ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕೃತ್ಯವನ್ನು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ (ಎಸ್‌ಸಿಬಿಎ) ಬಲವಾಗಿ ಖಂಡಿಸಿದೆ.
ಹೇಳಿಕೆಯಲ್ಲಿ ಎಸ್‌ಸಿಬಿಎಯ ಅಧ್ಯಕ್ಷರು, ಈ ಘಟನೆ ಮಹಿಳೆಯ ಗೌರವ ಹಾಗೂ ಸ್ವಾಯತ್ತತೆಯ ಗಂಭೀರ ಉಲ್ಲಂಘನೆಯಾಗಿದೆ ಎಂದು ವಿವರಿಸಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯೋರ್ವರು ಎಸಗಿದ ಈ ಕೃತ್ಯವು ತೀವ್ರ ಆಘಾತಕಾರಿ ಹಾಗೂ ಸ್ವೀಕಾರಾರ್ಹವಲ್ಲದ್ದು ಎಂದು ಸಂಘಟನೆ ಹೇಳಿದೆ.
ಈ ಘಟನೆಗೆ ಸಂಬಂಧಿಸಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹಾಗೂ ಉತ್ತರಪ್ರದೇಶದ ಸಚಿವ ಸಂಜಯ್ ನಿಶಾದ್ ನೀಡಿದ ಹೇಳಿಕೆಯನ್ನು ಕೂಡ ಎಸ್‌ಸಿಬಿಎ ಖಂಡಿಸಿದೆ. ಇಂತಹ ಹೇಳಿಕೆಗಳು ಮಹಿಳೆಯರ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತದೆ ಎಂದು ಅದು ಹೇಳಿದೆ.
ಇಂತಹ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ ಮಹಿಳೆಯ ಘನತೆ ಹಾಗೂ ಸ್ವಾಯತ್ತತೆಯನ್ನು ಅವಮಾನಿಸಲು ಹಾಗೂ ಆಕೆಯ ಹಿಜಾಬ್ ಅನ್ನು ಎಳೆಯಲು ಪ್ರಯತ್ನಿಸಿರುವುದು ಆಘಾತಕಾರಿ ಎಂದು ಅದು ತಿಳಿಸಿದೆ.
ಈ ಕೃತ್ಯ ಯುವ ವೈದ್ಯೆಯ ಸ್ವಾಯತ್ತತೆ, ಧಾರ್ಮಿಕ ಸ್ವಾತಂತ್ರವನ್ನು ಉಲ್ಲಂಘಿಸಿದೆ. ಇದು ಮಹಿಳೆಯರನ್ನು ಕೀಳಾಗಿ ಕಾಣುವ ಮನೋಭಾವವನ್ನು ಪ್ರತಿಬಿಂಬಿಸಿದೆ. ಇದು ಸಂವಿಧಾನದಲ್ಲಿರುವ ಸಮಾನತೆ ಮತ್ತು ತಾರತಮ್ಯ ರಹಿತ ತತ್ವಗಳಿಗೆ ವಿರುದ್ಧವಾಗಿದೆ ಎಂದು ಎಸ್‌ಸಿಬಿಎ ಹೇಳಿದೆ.
ಘಟನೆಯಲ್ಲಿ ಭಾಗಿಯಾದವರು ಭೇಷರತ್ತಾಗಿ ಕ್ಷಮೆ ಯಾಚಿಸಬೇಕು ಎಂದು ಎಸ್‌ಸಿಬಿಎ ಆಗ್ರಹಿಸಿದೆ. ಅಲ್ಲದೆ, ಸಾಂವಿಧಾನಿಕ ವೌಲ್ಯಗಳನ್ನು ಎತ್ತಿ ಹಿಡಿಯುವ ತನ್ನ ಬದ್ಧತೆಯನ್ನು ಪುನರುಚ್ಛರಿಸಿದೆ.