×
Ad

ಪಾಕಿಸ್ತಾನ-ಭಾರತ ನಡುವಿನ ಸಂಘರ್ಷದ ಕುರಿತು ಪೋಸ್ಟ್: ಜಾಮೀನು ಪಡೆದ ವಿದ್ಯಾರ್ಥಿನಿಗೆ ಪುಣೆ ಕಾಲೇಜಿನಿಂದ ವಿಶೇಷ ಪರೀಕ್ಷೆಯ ವ್ಯವಸ್ಥೆ

Update: 2025-05-29 12:11 IST

ಸಾಂದರ್ಭಿಕ ಚಿತ್ರ | Photo : Indiatoday.in

ಪುಣೆ: ಭಾರತ-ಪಾಕಿಸ್ತಾನ ನಡುವಿನ ಸಂಘರ್ಷದ ಕುರಿತು ಮಾಡಿದ್ದ ಪೋಸ್ಟ್‌ಗಾಗಿ ಹದಿನೈದು ದಿನಕ್ಕಿಂತಲೂ ಹೆಚ್ಚು ಕಾಲ ಸೆರೆವಾಸ ಅನುಭವಿಸಿ, ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ 19 ವರ್ಷದ ವಿದ್ಯಾರ್ಥಿನಿಗೆ ಪ್ರತ್ಯೇಕ ಸೆಮಿಸ್ಟರ್ ಪರೀಕ್ಷೆಯ ವ್ಯವಸ್ಥೆ ಮಾಡಲಾಗಿದೆ ಎಂದು ಬುಧವಾರ ಪುಣೆ ಮೂಲದ ಕಾಲೇಜೊಂದು ತಿಳಿಸಿದೆ.

ಬಂಧಿತ ವಿದ್ಯಾರ್ಥಿನಿಗೆ ಜಾಮೀನು ಮಂಜೂರು ಮಾಡಿದ್ದ ಬಾಂಬೆ ಹೈಕೋರ್ಟ್, ಆಕೆಯ ಜೀವನವನ್ನು ಹಾಳು ಮಾಡಲು ಆಕೆಯ ಮೇಲೆ ಮುಗಿಬಿದ್ದು, ಆಕೆಯನ್ನು ಬದ್ಧ ಕ್ರಿಮಿನಲ್ ಅನ್ನಾಗಿ ಪರಿವರ್ತಿಸಿದ್ದೀರಿ ಎಂದು ಮಹಾರಾಷ್ಟ್ರ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.

ಇದರೊಂದಿಗೆ, ಆಕೆಗೆ ಯಾವುದೇ ವಿವರಣೆ ನೀಡುವ ಅವಕಾಶ ನೀಡದೆ, ಆಕೆಯನ್ನು ತರಾತುರಿಯಲ್ಲಿ ಪರೀಕ್ಷೆಯಿಂದ ಹೊರಹಾಕಿದ ಸಿಂಹಗಢ್ ಅಕಾಡೆಮಿ ಆಫ್ ಇಂಜಿನಿಯರಿಂಗ್ ಕಾಲೇಜಿನ ವಿರುದ್ಧವೂ ನ್ಯಾಯಾಲಯ ಕಿಡಿ ಕಾರಿತ್ತು.

ಈ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಕಾಲೇಜಿನ ಪ್ರಾಂಶುಪಾಲ ಕಿಶೋರ್ ಪಾಟೀಲ್, "ಹೈಕೋರ್ಟ್ ಆದೇಶದ ಪ್ರಕಾರ, ಆಕೆಯ ಪರೀಕ್ಷೆಯನ್ನು ಪ್ರತ್ಯೇಕ ತರಗತಿ ಕೊಠಡಿಯಲ್ಲಿ ವ್ಯವಸ್ಥೆಗೊಳಿಸಲಾಗುವುದು" ಎಂದು ತಿಳಿಸಿದ್ದಾರೆ.ಇದಕ್ಕೂ ಮುನ್ನ ಪ್ರತಿಕ್ರಿಯಿಸಿದ್ದ ಕಿಶೋರ್ ಪಾಟೀಲ್, "ಆಕೆಗೆ ಬುಧವಾರ ಪರೀಕ್ಷಾ ಹಾಜರಾತಿ ಚೀಟಿಯನ್ನು ವಿತರಿಸಲಾಗಿದ್ದು, ಗುರುವಾರದಂದು ಆಕೆ ಪರೀಕ್ಷೆಗೆ ಹಾಜರಾಗಲಿದ್ದಾಳೆ" ಎಂದು ತಿಳಿಸಿದ್ದರು.

ಇತ್ತೀಚೆಗೆ ಭಾರತ-ಪಾಕಿಸ್ತಾನ ನಡುವೆ ಸ್ಫೋಟಗೊಂಡಿದ್ದ ಸಂಘರ್ಷದ ವೇಳೆ, ಭಾರತ ಸರಕಾರದ ಕ್ರಮವನ್ನು ಟೀಕಿಸಿ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಜಮ್ಮು ಮತ್ತು ಕಾಶ್ಮೀರದ ಬಿಟೆಕ್ ವಿದ್ಯಾರ್ಥಿನಿಯನ್ನು ಮೇ 9ರಂದು ಪುಣೆ ಪೊಲೀಸರು ಬಂಧಿಸಿದ್ದರು. ಬಾಂಬೆ ಹೈಕೋರ್ಟ್ ಆಕೆಗೆ ಜಾಮೀನು ಮಂಜೂರು ಮಾಡಿದ ನಂತರ, ಆಕೆಯನ್ನು ಮಂಗಳವಾರ ಯರವಾಡ ಜೈಲಿನಿಂದ ಬಿಡುಗಡೆಗೊಳಿಸಲಾಗಿತ್ತು.

ಆಕೆಯ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ, ಕಾಲೇಜು ಆಡಳಿತ ಮಂಡಳಿಯು ಆಕೆಯನ್ನು ಕಾಲೇಜಿನಿಂದ ಹೊರ ಹಾಕಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News