ಹಕ್ಕಿ ಢಿಕ್ಕಿ: ಪುಣೆ-ದಿಲ್ಲಿ ಏರ್ ಇಂಡಿಯಾ ವಿಮಾನ ಯಾನ ರದ್ದು
ಏರ್ ಇಂಡಿಯಾ | PTI
ಹೊಸದಿಲ್ಲಿ: ದಿಲ್ಲಿಯಿಂದ ಪುಣೆಗೆ ಹಾರುತ್ತಿದ್ದ ಏರ್ ಇಂಡಿಯಾ ವಿಮಾನವೊಂದಕ್ಕೆ ಹಕ್ಕಿ ಢಿಕ್ಕಿ ಹೊಡೆದ ಹಿನ್ನೆಲೆಯಲ್ಲಿ, ಶುಕ್ರವಾರ ವಿಮಾನದ ವಾಪಸ್ ಯಾನವನ್ನು ರದ್ದುಪಡಿಸಲಾಗಿದೆ. ವಿಮಾನವು ಪುಣೆಯಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ ಬಳಿಕ, ವಾಪಸ್ ದಿಲ್ಲಿ ಯಾನಕ್ಕಾಗಿ ಅದನ್ನು ಸಿದ್ಧಪಡಿಸುತ್ತಿದ್ದಾಗ ಹಕ್ಕಿ ಢಿಕ್ಕಿಯನ್ನು ಪತ್ತೆಹಚ್ಚಲಾಗಿದೆ.
‘‘ಜೂನ್ 20ರಂದು ಪುಣೆಯಿಂದ ದಿಲ್ಲಿಗೆ ಹಾರಲು ನಿಗದಿಯಾಗಿದ್ದ ಎಐ2470 ವಿಮಾನವನ್ನು ಹಕ್ಕಿ ಢಿಕ್ಕಿಯ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ. ದಿಲ್ಲಿಯಿಂದ ಬಂದ ವಿಮಾನವು ಪುಣೆಯಲ್ಲಿ ಸುರಕ್ಷಿತವಾಗಿ ಇಳಿದ ಬಳಿಕ ಹಕ್ಕಿ ಢಿಕ್ಕಿಯನ್ನು ಗಮನಿಸಲಾಗಿದೆ. ವಿಸ್ತೃತ ತಪಾಸಣೆಗಳನ್ನು ಮಾಡುವುದಕ್ಕಾಗಿ ವಿಮಾನವನ್ನು ಸೇವೆಯಿಂದ ಹೊರಗಿಡಲಾಗಿದೆ’’ ಎಂದು ಏರ್ ಇಂಡಿಯಾದ ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
ವಿಮಾನ ಹಾರಾಟ ಕ್ಷೇತ್ರದಲ್ಲಿ ಹಕ್ಕಿಗಳಿಗೆ ವಿಮಾನ ಢಿಕ್ಕಿಯಾಗುವುದು ಸಾಮಾನ್ಯವಾದರೂ, ಅದು ಗಂಭೀರ ಯಾಂತ್ರಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಒಮ್ಮೆ ವಿಮಾನವು ಹಕ್ಕಿಗೆ ಬಡಿದ ಬಳಿಕ, ಮುಂದಿನ ಹಾರಾಟಗಳಿಗೆ ಸಿದ್ಧಗೊಳ್ಳುವ ಮುನ್ನ ವಿಮಾನವು ವಿಸ್ತೃತ ತಪಾಸಣೆಗಳಿಗೆ ಒಳಗಾಗಬೇಕಾಗುತ್ತದೆ.
ದಿಲ್ಲಿ-ಪುಣೆ ವಿಮಾನಕ್ಕೆ ಹಕ್ಕಿ ಢಿಕ್ಕಿಯಾದ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಮತ್ತು ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಪುಣೆಯಲ್ಲಿ ಇಳಿದರು.