ಪಂಜಾಬ್ | ಅಸ್ತಿತ್ವದಲ್ಲೇ ಇಲ್ಲದ ಇಲಾಖೆ ಸಚಿವರಿಗೆ ಹಂಚಿಕೆ!
ಕುಲದೀಪ್ ಸಿಂಗ್ ಧಲಿವಾಲ್ (X/@KuldeepSinghAAP)
ಚಂಡೀಗಢ : ಪಂಜಾಬ್ ಸರಕಾರದ ಸಚಿವ ಕುಲದೀಪ್ ಸಿಂಗ್ ಧಲಿವಾಲ್‌ಗೆ ಹಂಚಿಕೆ ಮಾಡಿದ್ದ ಆಡಳಿತ ಸುಧಾರಣಾ ಇಲಾಖೆಯನ್ನು ಅಧಿಕೃತವಾಗಿ ವಿಸರ್ಜಿಸಿದೆ. ಈ ಇಲಾಖೆಯು ಕಳೆದ 20 ತಿಂಗಳಿಂದ ಅಸ್ತಿತ್ವದಲ್ಲಿರಲಿಲ್ಲ ಎಂದು ಹೇಳಲಾಗಿದೆ.
ಪಂಜಾಬ್ ಸರಕಾರದ ಮುಖ್ಯ ಕಾರ್ಯದರ್ಶಿ ಈ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಶಿಫಾರಸ್ಸಿನ ಮೇರೆಗೆ ಇಲಾಖೆಯನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ. ಈ ಹಿಂದೆ ಧಲಿವಾಲ್ ಅವರಿಗೆ ನಿಯೋಜಿಸಲಾಗಿದ್ದ ಆಡಳಿತ ಸುಧಾರಣಾ ಇಲಾಖೆಯು ಈಗ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಅವರು ಈಗ ಎನ್ಆರ್‌ಐ ವ್ಯವಹಾರಗಳ ಖಾತೆಯನ್ನು ಮಾತ್ರ ನಿರ್ವಹಿಸಲಿದ್ದಾರೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಆಡಳಿತ ಸುಧಾರಣಾ ಇಲಾಖೆಗೆ ಯಾವುದೇ ಸಿಬ್ಬಂದಿ ಇಲ್ಲ ಮತ್ತು ಇಲಾಖೆಗೆ ಸಂಬಂಧಿಸಿದ ಯಾವುದೇ ಸಭೆ ನಡೆದಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ Deccan Herald ವರದಿ ಮಾಡಿದೆ.
ಈ ಕುರಿತು ಪ್ರತಿಪಕ್ಷ ಬಿಜೆಪಿ ಪಂಜಾಬ್ ಎಎಪಿ ಸರಕಾರವನ್ನು ಟೀಕಿಸಿದೆ. ಪಂಜಾಬ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಶರ್ಮಾ ಮಾತನಾಡಿ, ಅಸ್ತಿತ್ವದಲ್ಲಿಲ್ಲದ ಇಲಾಖೆಯನ್ನು ಮಂಜೂರು ಮಾಡಿರುವುದು ಸರಕಾರದ ಮಾನಸಿಕ ದಿವಾಳಿತನವನ್ನು ತೋರಿಸುತ್ತದೆ. ಈ ಇಲಾಖೆ ಅಸ್ತಿತ್ವದಲ್ಲಿಲ್ಲ ಎಂದು ಅದನ್ನು ಮಂಜೂರು ಮಾಡಿದವರಿಗೆ ಅಥವಾ ಇಲಾಖೆ ಮಂಜೂರು ಮಾಡಿದವರಿಗೆ ತಿಳಿದಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.