×
Ad

ರೈತರ ಪ್ರತಿಭಟನೆ ಬಿಕ್ಕಟ್ಟನ್ನು ಅಂತ್ಯಗೊಳಿಸಲು ಕೇಂದ್ರದ ನೆರವು ಕೋರಿದ ಪಂಜಾಬ್ ಸರಕಾರ

Update: 2025-01-04 19:25 IST

ಶಿವರಾಜ್ ಸಿಂಗ್ ಚೌಹಾಣ್  | PTI 

ಹೊಸದಿಲ್ಲಿ : ಪಂಜಾಬ್-ಹರ್ಯಾಣ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಬಿಕ್ಕಟ್ಟನ್ನು ಅಂತ್ಯಗೊಳಿಸುವಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಮಧ್ಯಪ್ರವೇಶವನ್ನು ಕೋರಿ ಪಂಜಾಬ್ ಸರಕಾರವು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ.

ಪಂಜಾಬ್ ಕೃಷಿ ಸಚಿವ ಗುರ್ಮೀತ್ ಸಿಂಗ್ ಖುಡ್ಡಿಯಾನ್ ಅವರು ಡಿ.20ರಂದು ಬರೆದಿರುವ ಪತ್ರದಲ್ಲಿ ಹಿರಿಯ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ನ.26ರಿಂದ ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಮತ್ತು ಇದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಅವಲೋಕನವನ್ನೂ ಎತ್ತಿ ತೋರಿಸಲಾಗಿದೆ. ಅಗತ್ಯವಾದರೆ ದಲ್ಲೆವಾಲ್‌ರನ್ನು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಡಿ.19ರಂದು ರಾಜ್ಯದ ಅಧಿಕಾರಿಗಳಿಗೆ ಸೂಚಿಸಿತ್ತು.

ಡಿ.20ರಂದೇ ಪತ್ರವನ್ನು ಬರೆಯಲಾಗಿತ್ತಾದರೂ ಕೇಂದ್ರ ಕೃಷಿ ಸಚಿವಾಲಯವು ಈ ವಾರವಷ್ಟೇ ಅದನ್ನು ಸ್ವೀಕರಿಸಿದೆ.

ಚೌಹಾಣ ಈವರೆಗೆ ಪತ್ರಕ್ಕೆ ಪ್ರತಿಕ್ರಿಯಿಸದಿದ್ದರೂ ಬುಧವಾರ ಸುದ್ದಿಗೋಷ್ಠಿಯಲ್ಲಿ ದಲ್ಲೆವಾಲ್ ಉಪವಾಸ ಕುರಿತು ಪ್ರಶ್ನೆಗೆ ಉತ್ತರಿಸಿದ್ದ ಅವರು,ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ತನ್ನ ಸಚಿವಾಲಯವು ಕ್ರಮವನ್ನು ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದರು.

ರೈತರನ್ನು ಮಾತುಕತೆಗೆ ಆಹ್ವಾನಿಸುತ್ತೀರಾ ಎಂಬ ಪ್ರಶ್ನೆಗೆ ಚೌಹಾಣ,ತಾನು ಪ್ರತಿ ಮಂಗಳವಾರ ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿಯಾಗಿ ಸಂವಾದ ನಡೆಸುತ್ತಿದ್ದೇನೆ ಎಂದು ಉತ್ತರಿಸಿದ್ದರು.

ರೈತರು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಖಾತರಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ವರ್ಷದ ಫೆಬ್ರವರಿಯಿಂದ ಪಂಜಾಬ್-ಹರ್ಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News