×
Ad

ಕೊಲೆ, ಸೋಶಿಯಲ್ ಮೀಡಿಯಾ ಇನ್ಫ್ಲುವೆನ್ಸರ್ ಗಳಿಗೆ ಬೆದರಿಕೆ; ಆರೋಪಿ ಮೆಹ್ರೋನ್‌ ಗಾಗಿ ಪಂಜಾಬ್ ಪೋಲಿಸರಿಂದ ಲುಕ್‌ಔಟ್ ನೋಟಿಸ್

Update: 2025-06-15 20:28 IST

ಅಮೃತಪಾಲ್ ಸಿಂಗ್ ಮೆಹ್ರೋನ್‌ | Photo | X via @Amritpa84909556

ಚಂಡಿಗಡ: ‘ಅಶ್ಲೀಲ’ವಿಷಯವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಕಂಚನ ಕುಮಾರಿ ಅಲಿಯಾಸ್ ಕಮಲ ಕೌರ್ ಭಾಬಿ ಕೊಲೆ ಆರೋಪಿ ಸ್ವಘೋಷಿತ ಸಿಖ್ ಮೂಲಭೂತವಾದಿ ಅಮೃತಪಾಲ್ ಸಿಂಗ್ ಮೆಹ್ರೋನ್‌ ಗಾಗಿ ಪಂಜಾಬ್ ಪೋಲಿಸರು ಲುಕ್‌ಔಟ್ ನೋಟಿಸನ್ನು ಹೊರಡಿಸಿದ್ದಾರೆ.

ಸಿಮ್ರನ್‌ಪ್ರೀತ್ ಕೌರ್ ಅಲಿಯಾಸ್ ‘ಪ್ರೀತ್ ಜಟ್ಟಿ’ ಮತ್ತು ದೀಪಿಕಾ ಲುಥ್ರಾ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮ ಪ್ರಭಾವಿಗಳಿಗೂ ಬೆದರಿಕೆಯನ್ನೊಡ್ಡಿರುವ ಮೆಹ್ರೋನ್ ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ.

ಜನಾಂಗೀಯ ವಿಷಯಗಳನ್ನು ಮತ್ತು ಕೊಲೆ ಬೆದರಿಕೆಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಭಾರತದಲ್ಲಿಯ ಆತನ ನಾಲ್ಕು ಇನ್‌ಸ್ಟಾಗ್ರಾಂ ಹ್ಯಾಂಡಲ್‌ ಗಳನ್ನು ಮತ್ತು ಆತನ ನೇತೃತ್ವದ ‘ಕೌಮ್ ದೆ ರಾಖೆ’ ಗುಂಪಿನ ಖಾತೆಯನ್ನು ಪಂಜಾಬ್ ಪೋಲಿಸರು ನಿರ್ಬಂಧಿಸಿದ್ದಾರೆ.

30ರ ಹರೆಯದ ನಿಹಾಂಗ್ ಮತ್ತು ಮೋಗಾ ನಿವಾಸಿ ಮೆಹ್ರೋನ್ ಸಾಮಾಜಿಕ ಮಾಧ್ಯಮಗಳಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಫಾಲೋವರ್‌ ಗಳನ್ನು ಹೊಂದಿದ್ದಾನೆ.

ಮೆಹ್ರೋನ್‌ ನ ಆಕ್ಷೇಪಾರ್ಹ ಕಂಟೆಂಟ್‌ಗಳನ್ನು ಬೆಂಬಲಿಸಿದ್ದಕ್ಕಾಗಿ ಹಲವಾರು ಇತರ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ. ಆತಂಕಕಾರಿಯಾಗಿ, ಪಂಜಾಬ್ ಮತ್ತು ಹರ್ಯಾಣದ ಕೆಲವು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಕಂಚನ್ ಅವರ ಹತ್ಯೆಯನ್ನು ಇಂತಹ ಕಂಟೆಂಟ್‌ಗಳನ್ನು ಸೃಷ್ಟಿಸುವವರಿಗೆ ಎಚ್ಚರಿಕೆ ಎಂದು ಸಮರ್ಥಿಸಿಕೊಂಡು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.

ಶನಿವಾರ ತನ್‌ ತರನ್‌ ನ ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ರಭಾವಿ, ಐದು ಲಕ್ಷಕ್ಕೂ ಅಧಿಕ ಇನ್‌ ಸ್ಟಾಗ್ರಾಂ ಹಿಂಬಾಲಕರನ್ನು ಹೊಂದಿರುವ ಸಿಮರ್‌ಪ್ರೀತ್ ಕೌರ್ ಅಲಿಯಾಸ್ ‘ಪ್ರೀತ್ ಜಟ್ಟಿ’ ಜ್ಯೋತಿಷ್ಯ ಶಾಸ್ತ್ರವನ್ನು ಪ್ರಚಾರ ಮಾಡಿದ್ದಕ್ಕಾಗಿ ತನಗೆ ಜೀವ ಬೆದರಿಕೆಗಳು ಬಂದಿವೆ ಎಂದು ಬಹಿರಂಗಗೊಳಿಸಿದ್ದು, ಪೋಲಿಸ್ ರಕ್ಷಣೆಗಾಗಿ ಮನವಿ ಮಾಡಿಕೊಂಡಿದ್ದಾರೆ. ತನ್ನ ಐದು ತಿಂಗಳ ಮಗುವಿನ ಬಗ್ಗೆ ಕಳವಳವನ್ನು ಅವರು ಎತ್ತಿ ತೋರಿಸಿದ್ದಾರೆ.

ಮೆಹ್ರೋನ್ ತನಗೂ ಬೆದರಿಕೆಯೊಡ್ಡಿದ್ದಾನೆ ಎಂದು ಅಮೃತಸರದ ಇನ್ನೋರ್ವ ಸಾಮಾಜಿಕ ಮಾಧ್ಯಮ ಪ್ರಭಾವಿ ದೀಪಿಕಾ ಲುಥ್ರಾ ಹೇಳಿದ್ದಾರೆ. ತನ್ನ ಹಿಂದಿನ ಪೋಸ್ಟ್‌ಗಳನ್ನು ಅಳಿಸಿ ಸಾರ್ವಜನಿಕವಾಗಿ ಕ್ಷಮೆಯನ್ನೂ ಕೋರಿದ್ದರೂ ಈಗಲೂ ತಾನು ಅಪಾಯದಲ್ಲಿದ್ದೇನೆ ಎಂದು ಭಾವಿಸಿರುವುದಾಗಿ ಹೇಳಿದ್ದಾರೆ. ‘ಹಲವಾರು ಪಾರ್ಕಿಂಗ್ ಸ್ಥಳಗಳಿವೆ ಮತ್ತು ಪ್ರತಿ ಬಾರಿಯೂ ಶವ ಪತ್ತೆಯಾಗುವುದು ಅಗತ್ಯವೇನಲ್ಲ’ ಎಂದು ಮೆಹ್ರೋನ್ ಆಕೆಗೆ ಎಚ್ಚರಿಕೆ ನೀಡಿದ್ದಾನೆ ಎನ್ನಲಾಗಿದೆ.

ಲುಥ್ರಾ ಮತ್ತು ಇತರರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಮೆಹ್ರೋನ್ ವಿರುದ್ಧ ಪ್ರಕರಣವನ್ನು ದಾಖಲಿಸಿರುವ ಅಮೃತಸರ ಪೋಲಿಸ್‌ ನ ಸೈಬರ್ ಅಪರಾಧ ವಿಭಾಗವು, 'ಡಬಲ್ ಮೀನಿಂಗ್’ ಅಥವಾ ಅಶ್ಲೀಲ ವಿಷಯವನ್ನು ಪೋಸ್ಟ್ ಮಾಡದಂತೆ ಅವರಿಗೆ ಎಚ್ಚರಿಕೆ ನೀಡಿದೆ.

ಸಾಮಾಜಿಕ ಮಾಧ್ಯಮ ವೇದಿಕೆ ಪೆಂಡು ಜಟ್ಟ ರೆಕಾರ್ಡ್ಸ್‌ ನ ಮೂವರು ಸದಸ್ಯರು ಶುಕ್ರವಾರ ವಿಡಿಯೊವೊಂದನ್ನು ಪೋಸ್ಟ್ ಮಾಡಿ ಮೆಹ್ರೋನ್ ಕ್ಷಮೆಯನ್ನು ಕೋರಿದ್ದು, ’ಅಶ್ಲೀಲ’ ವಿಷಯಗಳನ್ನು ಪೋಸ್ಟ್ ಮಾಡುವುದನ್ನು ನಿಲ್ಲಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಕಂಚನ್ ಹತ್ಯೆಯ ಬಳಿಕ ಮೆಹ್ರೋನ್ ಯುಎಎಇಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News