×
Ad

ಡಿ.4ಕ್ಕೆ ಪುಟಿನ್ ಭಾರತಕ್ಕೆ; ಪ್ರಧಾನಿ ಮೋದಿ ಜೊತೆ ಮಾತುಕತೆ

ಆರ್ಥಿಕತೆ, ರಕ್ಷಣೆ ಸಹಿತ ಮಹತ್ವದ ಒಪ್ಪಂದಗಳಿಗೆ ಅಂಕಿತ ನಿರೀಕ್ಷೆ

Update: 2025-12-03 20:54 IST

ವ್ಲಾದಿಮಿರ್ ಪುಟಿನ್ | Photo Credit : AP \ PTI 

ಹೊಸದಿಲ್ಲಿ,ಡಿ.3: ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ಭಾರತಕ್ಕೆ ಆಗಮಿಸಲಿದ್ದಾರೆ. ಎರಡು ದಿನಗಳ ತನ್ನ ಪ್ರವಾಸದಲ್ಲಿ ಅವರು ಆರ್ಥಿಕತೆ, ರಕ್ಷಣೆ ಹಾಗೂ ಇಂಧನ ಕ್ಷೇತ್ರದಲ್ಲಿ ಉಭಯದೇಶಗಳ ಬಾಂಧವ್ಯವನ್ನು ಬಲಪಡಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಉಕ್ರೇನ್ ಯುದ್ದ ಮುಂದುವರಿವಂತೆಯೇ ರಶ್ಯ ಹಾಗೂ ಅಮೆರಿಕ ನಡುವೆ ತನ್ನ ಸಂಬಂಧವನ್ನು ಸಮತೋಲನದಲ್ಲಿರಿಸುವ ಭಾರತದ ಪ್ರಯತ್ನಕ್ಕೆ ಪುಟಿನ್ ಅವರ ಈ ಭೇಟಿಯು ಒಂದು ಸತ್ವಪರೀಕ್ಷೆಯಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

ಪುತಿನ್ ಗುರುವಾರ ಹೊಸದಿಲ್ಲಿಗೆ ಆಗಮಿಸಲಿದ್ದು, ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಉಭಯದೇಶಗಳು ಪ್ರಮುಖ ಪ್ರಾದೇಶಿಕ ವಿಷಯಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಸರಣಿ ಸರಕಾರಿ ಹಾಗೂ ವಾಣಿಜ್ಯ ಒಪ್ಪಂದಗಳಿಗೆ ಸಹಿಹಾಕಲಿವೆ.

ಪುಟಿನ್ ಅವರು ಇದಕ್ಕೆ ಮುನ್ನ 2021ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿ ಕಳೆದ ವರ್ಷ ಮಾಸ್ಕೊಗೆ ತೆರಳಿದ್ದರು. ಈ ವರ್ಷದ ಸೆಪ್ಟೆಂಬರ್‌ ನಲ್ಲಿ ಚೀನಾದಲ್ಲಿ ನಡೆದ ಶಾಂಘಾ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಈ ಉಭಯನಾಯಕರು ಸಂಕ್ಷಿಪ್ತವಾಗಿ ಮಾತುಕತೆ ನಡೆಸಿದ್ದರು.

ಪುಟಿನ್ ಅವರ ಹೊಸದಿಲ್ಲಿ ಭೇಟಿ ಸಂದರ್ಭ ಭಾರತ ಹಾಗೂ ರಶ್ಯಗಳು ದ್ವಿಪಕ್ಷೀಯ ಬಾಂಧವ್ಯವನ್ನು ಉತ್ತೇಜಿಸುವ ನಿರೀಕ್ಷೆಯನ್ನು ಹೊಂದಿವೆ. ಈ ಸಂಅದರ್ಭ ಅವು ಆರ್ಥಿಕ ಸಹಕಾರ, ವಾಣಿಜ್ಯ ಸಂಪರ್ಕ, ಸಾಗರಯಾನ, ಆರೋಗ್ಯ ಪಾಲನೆ ಇತ್ಯಾದಿ ವಿಷಯಗಳನ್ನು ಕೇಂದ್ರೀಕರಿಸಿದ ಒಡಂಬಡಿಕೆಗಳನ್ನು ಏರ್ಪಡಿಸಿಕೊಳ್ಳುವ ನಿರೀಕ್ಷೆಯಿದೆ.

ಇದರ ಜೊತೆ ರಶ್ಯಕ್ಕೆ ಸುರಕ್ಷಿತ ಹಾಗೂ ನಿಯಂತ್ರಿತವಾದ ವಲಸೆಗೆ ಅವಕಾಶ ನೀಡುವ ಒಪ್ಪಂದವನ್ನು ಅಂತಿಮಗೊಳಿಸುವ ಉಭಯದೇಶಗಳು ಶ್ರಮಿಸುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News