ತಂದೆಯ ಅಂತ್ಯಕ್ರಿಯೆ ಖರ್ಚಿನ ಕುರಿತು ಜಗಳ: ಅಣ್ಣನನ್ನು ಹತ್ಯೆಗೈದ ತಮ್ಮ!
Update: 2025-10-23 22:45 IST
ಸಾಂದರ್ಭಿಕ ಚಿತ್ರ
ಜೈಪುರ: ತಂದೆಯ ಅಂತ್ಯಕ್ರಿಯೆ ಖರ್ಚಿನ ಕುರಿತು ಉದ್ಭವಿಸಿದ ಜಗಳದಲ್ಲಿ ಕಿರಿಯ ಸಹೋದರನೇ ತನ್ನ ಹಿರಿಯಣ್ಣನನ್ನು ಮಾರಕಾಸ್ತ್ರದಿಂದ ಕೊಚ್ಚಿ ಹತ್ಯೆಗೈದಿರುವ ಘಟನೆ ಬುಧವಾರ ರಾತ್ರಿ ರಾಜಸ್ಥಾನದ ಬರ್ಮೇರ್ ನ ಬೀಜರಾದ್ ಪೊಲೀಸ್ ಠಾಣೆ ವ್ಯಾಪ್ತಿಯ ನವತ್ಲಾ ಗ್ರಾಮದಲ್ಲಿ ನಡೆದಿದೆ.
“ಅಂತ್ಯಕ್ರಿಯೆ ಖರ್ಚಿನ ವಿಚಾರವಾಗಿ ಹಿರಿಯಣ್ಣ ಗಣೇಶ್ ರಾಮ್ (35) ಹಾಗೂ ಅವರ ಕಿರಿಯ ಸಹೋದರ ಕಿಶನ್ ರಾಮ್ (30) ನಡುವೆ ಮಾತಿನ ವಾಗ್ವಾದ ನಡೆದಿದೆ. ಮಾತು ವಿಕೋಪಕ್ಕೆ ತಿರುಗಿದ್ದು, ತನ್ನ ಹಿರಿಯಣ್ಣನ ಮೇಲೆ ಕಿಶನ್ ರಾಮ್ ಹಿಂದಿನಿಂದ ಬಂದು ಕೊಡಲಿಯಿಂದ ದಾಳಿ ನಡೆಸಿದ್ದಾನೆ. ದಾಳಿಯ ತೀವ್ರತೆಗೆ ಕುಸಿದು ಬಿದ್ದಿರುವ ಗಣೇಶ್ ರಾಮ್, ಸ್ಥಳದಲ್ಲೇ ಮೃತಪಟ್ಟಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಕಿಶನ್ ರಾಮ್ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಆತನ ಪತ್ತೆಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.