ರಾಯ್ ಬರೇಲಿ ಗುಂಪು ಹತ್ಯೆ: ಮತ್ತೆ ಇಬ್ಬರ ಬಂಧನ
ಬಂಧಿತರ ಸಂಖ್ಯೆ 16ಕ್ಕೆ ಏರಿಕೆ
Update: 2025-10-18 22:13 IST
ಸಾಂದರ್ಭಿಕ ಚಿತ್ರ | Photo Credit : freepik.com
ರಾಯ್ ಬರೇಲಿ (ಉತ್ತರ ಪ್ರದೇಶ): ಪರಿಶಿಷ್ಟ ಜಾತಿ ಸಮುದಾಯದ ಹರಿಓಂ ಎಂಬ ವ್ಯಕ್ತಿಯನ್ನು ಥಳಿಸಿ ಹತ್ಯೆಗೈದ ಆರೋಪಕ್ಕೆ ಸಂಬಂಧಿಸಿದಂತೆ ರಾಯ್ ಬರೇಲಿ ಜಿಲ್ಲೆಯಲ್ಲಿ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಅಜಯ್ ಅಗ್ರಹಾರಿಯನ್ನು ಅಕ್ಟೋಬರ್ 15ರಂದು ಬಂಧಿಸಲಾಗಿದ್ದರೆ, ಅಖಿಲೇಶ್ ಮೌರ್ಯನನ್ನು ಇಂದು (ಶನಿವಾರ) ಬಂಧಿಸಲಾಗಿದೆ. ಈ ಬಂಧನದೊಂದಿಗೆ ಇಲ್ಲಿಯವರೆಗೆ ಒಟ್ಟು 16 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಮನೆಗಳ ದರೋಡೆ ನಡೆಸಲು ಗುಂಪೊಂದು ಡ್ರೋನ್ ಕಣ್ಗಾವಲು ನಡೆಸುತ್ತಿದ್ದ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಅಕ್ಟೋಬರ್ 2ರ ಮಧ್ಯರಾತ್ರಿ ಒಂದು ಗಂಟೆಗೆ ಗ್ರಾಮಸ್ಥರು ರಾತ್ರಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಕಣ್ಣಿಗೆ ಬಿದ್ದ ಹರಿಓಂ ವಾಲ್ಮೀಕಿ (40) ರನ್ನು ಕಳ್ಳನೆಂದು ತಪ್ಪಾಗಿ ಭಾವಿಸಿ, ಥಳಿಸಿ ಹತ್ಯೆಗೈದಿದ್ದರು.