×
Ad

ಪ್ರಧಾನಿ ಮೋದಿ ಸಂಪುಟದೊಂದಿಗೆ ಸಮಾಲೋಚಿಸದೆ ಮನರೇಗಾವನ್ನು ರದ್ದುಗೊಳಿಸಿದ್ದಾರೆ: ರಾಹುಲ್ ಗಾಂಧಿ ಆರೋಪ

Update: 2025-12-28 15:34 IST

ರಾಹುಲ್ ಗಾಂಧಿ |  Photo Credit : PTI 

ಹೊಸದಿಲ್ಲಿ,ಡಿ.28: ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬಂಟಿಯಾಗಿ ಮನರೇಗಾವನ್ನು ನಾಶಗೊಳಿಸುತ್ತಿದ್ದಾರೆ ಎಂದು ಆರೋಪಿಸಿರುವ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು, ಸಂಪುಟದೊಂದಿಗೆ ಸಮಾಲೋಚಿಸದೆ ಕಾಯ್ದೆಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಶನಿವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮನರೇಗಾ ಕೇವಲ ಒಂದು ಯೋಜನೆಯಾಗಿರಲಿಲ್ಲ, ಅದು ದುಡಿಯುವ ಹಕ್ಕನ್ನು ಆಧರಿಸಿದ್ದ ಪರಿಕಲ್ಪನೆಯಾಗಿತ್ತು. ಮನರೇಗಾ ಮೂಲಕ ದೇಶದ ಕೋಟ್ಯಂತರ ಜನರಿಗೆ ಕನಿಷ್ಠ ವೇತನವನ್ನು ಖಚಿತಗೊಳಿಸಲಾಗಿತ್ತು. ಪಂಚಾಯತ್ ರಾಜ್‌ನಲ್ಲಿ ನೇರ ರಾಜಕೀಯ ಸಹಭಾಗಿತ್ವ ಮತ್ತು ಹಣಕಾಸು ಬೆಂಬಲಕ್ಕೆ ಮನರೇಗಾ ಮಾರ್ಗವಾಗಿತ್ತು. ಪ್ರಧಾನಿಯವರು ತನ್ನ ಸಂಪುಟದೊಂದಿಗೆ ಸಮಾಲೋಚಿಸದೆ ಮತ್ತು ಈ ವಿಷಯವನ್ನು ಅಧ್ಯಯನ ಮಾಡದೆ ಏಕಾಂಗಿಯಾಗಿ ಅದನ್ನು ನಾಶಗೊಳಿಸುತ್ತಿದ್ದಾರೆ ಎಂದು ಹೇಳಿದರು.

ಮನರೇಗಾವನ್ನು ರದ್ದುಗೊಳಿಸುವ ಮೂಲಕ ಮೋದಿ ಸರಕಾರವು ಹಕ್ಕುಗಳ ಪರಿಕಲ್ಪನೆ ಮತ್ತು ಒಕ್ಕೂಟ ರಚನೆಯ ಮೇಲೆ ದಾಳಿ ನಡೆಸುತ್ತಿದೆ. ಅದು ರಾಜ್ಯಗಳಿಂದ ಹಣವನ್ನು ಕಿತ್ತುಕೊಳ್ಳುತ್ತಿದೆ. ಇದು ಅಧಿಕಾರ ಮತ್ತು ಹಣಕಾಸಿನ ಕೇಂದ್ರೀಕರಣವಾಗಿದ್ದು, ದೇಶಕ್ಕೆ ಮತ್ತು ಬಡವರಿಗೆ ಹಾನಿಯನ್ನುಂಟು ಮಾಡುತ್ತದೆ. ಪ್ರಧಾನಿ ಕಚೇರಿಯು ಸಚಿವರು ಅಥವಾ ಸಂಪುಟದೊಂದಿಗೆ ಸಮಾಲೋಚಿಸದೇ ನೇರವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ದೇಶದಲ್ಲಿ ‘ಒನ್-ಮ್ಯಾನ್ ಶೋ’ ನಡೆಯುತ್ತಿದೆ ಎನ್ನುವುದನ್ನು ತೋರಿಸಿದೆ ಎಂದು ಹೇಳಿದರು.

ಮನರೇಗಾ ರದ್ದತಿಯಿಂದ ಗೌತಮ್‌ ಅದಾನಿಯಂತಹ ಕೆಲವೇ ಬಂಡವಾಳಶಾಹಿಗಳಿಗೆ ಲಾಭವಾಗಲಿದೆ ಎಂದು ಹೇಳಿದ ರಾಹುಲ್ ಗಾಂಧಿ, ಬಡವರಿಂದ ಹಣವನ್ನು ಕಿತ್ತುಕೊಳ್ಳುವುದು ಮತ್ತು ಅದನ್ನು ಅದಾನಿಯಂತಹ ವ್ಯಕ್ತಿಗಳಿಗೆ ನೀಡುವುದು ಮನರೇಗಾ ರದ್ದತಿಯ ಉದ್ದೇಶವಾಗಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News