×
Ad

ರಸ್ತೆಗಳು, ಸೇತುವೆಗಳು ಕೊಲ್ಲುತ್ತಿವೆ; ಉತ್ತರದಾಯಿತ್ವದ ಕೊರತೆಯಿದೆ: ರಾಹುಲ್ ಗಾಂಧಿ

ಟೆಕ್ಕಿಯ ಸಾವಿಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ

Update: 2026-01-20 21:20 IST

ರಾಹುಲ್ ಗಾಂಧಿ | Photo Credit ; PTI 

ಹೊಸದಿಲ್ಲಿ, ಜ. 20: ಉತ್ತರ ಪ್ರದೇಶದ ನೋಯಿಡದಲ್ಲಿ ನಡೆದ ಅಪಘಾತವೊಂದರಲ್ಲಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಯೊಬ್ಬ ಮೃತಪಟ್ಟಿರುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಹಣ, ತಂತ್ರಜ್ಞಾನ ಅಥವಾ ಪರಿಹಾರದ ಕೊರತೆಯಿಗಿಂತಲೂ ಹೆಚ್ಚು ಉತ್ತರದಾಯಿತ್ವದ ಕೊರತೆಯೇ ಕಾರಣ ಎಂದು ಅವರು ಆರೋಪಿಸಿದ್ದಾರೆ.

‘‘ಈ ಭಾರತದಲ್ಲಿ ರಸ್ತೆಗಳು, ನೀರು, ಮಾಲಿನ್ಯ ಮತ್ತು ನಿರ್ಲಕ್ಷ್ಯ ಜನರನ್ನು ಕೊಲ್ಲುತ್ತಿವೆ’’ ಎಂದು ಅವರು ಹೇಳಿದ್ದಾರೆ.

27 ವರ್ಷದ ಯುವರಾಜ್ ಮೆಹ್ತಾರ ಕಾರು ನೋಯಿಡದ ಸೆಕ್ಟರ್ 150ರಲ್ಲಿ ಶನಿವಾರ ಮುಂಜಾನೆ ದಟ್ಟ ಹೊಗೆಯಿಂದಾಗಿ ಚರಂಡಿಯ ಗೋಡೆಗೆ ಬಡಿದು, ನೀರಿನಿಂದಾವೃತವಾದ ಆಳವಾದ ಹೊಂಡವೊಂದಕ್ಕೆ ಬಿದ್ದಿತ್ತು. ವಾಣಿಜ್ಯ ಸಂಕೀರ್ಣವೊಂದರ ತಳ ಅಂತಸ್ತು ನಿರ್ಮಾಣಕ್ಕಾಗಿ ಈ ಹೊಂಡವನ್ನು ಅಗೆಯಲಾಗಿತ್ತು. ಯಾವುದೇ ಸಹಾಯ ಸಿಗದ ಕಾರಣ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟರು.

‘‘ರಸ್ತೆಗಳು ಕೊಲ್ಲುತ್ತವೆ, ಸೇತುವೆಗಳು ಕೊಲ್ಲುತ್ತವೆ, ಬೆಂಕಿ ಕೊಲ್ಲುತ್ತದೆ, ನೀರು ಕೊಲ್ಲುತ್ತದೆ, ಮಾಲಿನ್ಯ ಕೊಲ್ಲುತ್ತದೆ, ಭ್ರಷ್ಟಾಚಾರ ಕೊಲ್ಲುತ್ತದೆ, ನಿರ್ಲಕ್ಷ್ಯ ಕೊಲ್ಲುತ್ತದೆ’’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ಹಾಕಿದ ಸಂದೇಶದಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.

‘‘ಹಣ, ತಂತ್ರಜ್ಞಾನ ಅಥವಾ ಪರಿಹಾರಗಳ ಕೊರತೆಯಿಂದ ಭಾರತದ ನಗರ ವ್ಯವಸ್ಥೆ ಕುಸಿದಿಲ್ಲ; ಉತ್ತರದಾಯಿತ್ವದ ಕೊರತೆಯಿಂದಾಗಿ ಅದು ಕುಸಿದಿದೆ. ಇಲ್ಲಿ ಉತ್ತರದಾಯಿತ್ವವೇ ಇಲ್ಲ’’ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ ಬರೆದಿದ್ದಾರೆ.

ಸಕಾಲದಲ್ಲಿ ನೆರವು ಬಂದಿದ್ದರೆ ಅವರನ್ನು ಬದುಕಿಸಬಹುದಾಗಿತ್ತು ಎಂಬುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ಹೇಳುವುದನ್ನು ತೋರಿಸುವ ವೀಡಿಯೊವೊಂದನ್ನು ರಾಹುಲ್ ಗಾಂಧಿ ತನ್ನ ಸಂದೇಶದ ಜೊತೆಗೆ ಹಂಚಿಕೊಂಡಿದ್ದಾರೆ. ಜೊತೆಗೆ ಮೃತನ ತಂದೆಯ ವೀಡಿಯೊವನ್ನೂ ಅವರು ಹಂಚಿಕೊಂಡಿದ್ದಾರೆ.

‘‘ಸ್ಥಳದಲ್ಲಿ ಹಲವು ಮಂದಿ ಸೇರಿದ್ದರು. ಅವರ ಪೈಕಿ ಕೆಲವರು ವೀಡಿಯೊ ಮಾಡುತ್ತಿದ್ದರು; ನನ್ನ ಮಗನನ್ನು ರಕ್ಷಿಸಲು ಏನೂ ಮಾಡಲಿಲ್ಲ’’ ಎಂದು ತಂದೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News